ಉಡುಪಿ ಪರ್ಯಾಯ: ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ
(Udupi) : ಉಡುಪಿ: ಉಡುಪಿ ಪರ್ಯಾಯೋತ್ಸವದಂದು ನಡೆಯುವ ಒಂದು ಸಾಂಪ್ರದಾಯಿಕ ಶಾಸ್ತ್ರ ‘ಅಡುಗೆ ಮನೆಯ ಸೂರೆ’.
ಪರ್ಯಾಯ ಮಠವು ನಿತ್ಯ ಸಾವಿರಾರು ಮಂದಿಗೆ ಅನ್ನದಾನ ನಡೆಸುತ್ತದೆ. 2 ವರ್ಷಗಳ ಪರ್ಯಾಯ ಕೊನೆ ದಿನ ಮಧ್ಯಾಹ್ನ ಅನ್ನಪ್ರಸಾದ ವಿತರಣೆಯ ನಂತರ, ಸುಮಾರು 3 ಗಂಟೆಗೆ ಉಳಿದ ಎಲ್ಲಾ ಅಡುಗೆಯನ್ನು ಭಾರಿ ಗಾತ್ರದ ಪಾತ್ರೆಗಳಲ್ಲಿ ಅಡುಗೆ ಮನೆಯಲ್ಲಿ ಬಿಟ್ಟು ಬಿಡಲಾಗುತ್ತದೆ.
ಇದನ್ನು ಸ್ಥಳೀಯರು ತಂತಮ್ಮ ಮನೆಯಿಂದ ಪಾತ್ರೆ, ಹಂಡೆಗಳನ್ನು ತಂದು ಬೇಕಾದಷ್ಟು ತುಂಬಿಸಿಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಅನ್ನ, ಸಾರು, ಸಾಂಬಾರು, ಪಾಯಸ ಇತ್ಯಾದಿಗಳನ್ನು ತುಂಬಿಕೊಳ್ಳಲು ಸ್ಪರ್ಧೆಯೇ ನಡೆಯುತ್ತದೆ.
ಆಳೆತ್ತರದ ಭಾರೀ ಹಂಡೆಯಲ್ಲಿರುವ ಬಿಸಿಬಿಸಿ ಸಾಂಬಾರು, ಪಾಯಸವನ್ನು ಜನರು ಹಂಡೆಯ ಸುತ್ತ ನಿಂತು ಬಾಲ್ದಿಗೆ ಹಗ್ಗ ಕಟ್ಟಿ ಹಂಡೆಗೆ ಇಳಿಸಿ ಮೇಲೆಳೆಯುವುದನ್ನು ನೋಡುವುದೇ ಒಂದು ಹಬ್ಬ.
ಹಗಲಾಗುವಾಗ ಎಲ್ಲವೂ ಹೊಸತು. ಕೃಷ್ಣಮಠದಲ್ಲಿ ಪರ್ಯಾಯ ಅಧಿಕಾರ ಸ್ವೀಕಾರ ಎಂದರೆ ಜ.17ರ ರಾತ್ರಿ 18ರ ಹಗಲಾವುದರೊಳಗೆ ಪೂರ್ಣ ಹೊಸ ವ್ಯವಸ್ಥೆ ಜಾರಿಯಾಗುತ್ತದೆ.
ನಿರ್ಗಮನ ಮಠದವರು ಪಾತ್ರೆ, ಪರಡಿ, ಚಾಪೆ ಸಹಿತ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ. ಆಗಮನ ಮಠಾಧೀಶರು ಮರುದಿನದ ಅನ್ನದಾನಕ್ಕೆ ಬೇಕಾದ ಅಕ್ಕಿ, ಬೇಳೆ, ತರಕಾರಿ, ಪಾತ್ರೆ ಇತ್ಯಾದಿಗಳೆಲ್ಲವನ್ನೂ ಹೊಸತಾಗಿ ಜೋಡಿಸಿಕೊಳ್ಳಬೇಕಾಗುತ್ತದೆ.
ಕೃಷ್ಣನ ಪೂಜೆಗೆ ಹೊಸ ಮಠಾಧಿಪತಿಗಳ ಜೊತೆಗೆ ಮಠದ ಅಧಿಕಾರಿಗಳು, ಸಿಬ್ಬಂದಿ ಕೂಡ ಹೊಸಬರೇ ನೇಮಕ ಆಗಿರುತ್ತಾರೆ.

