ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಪತನ
ಮೋಸ್ಕೋ; ಭಾರತದ ಚಂದ್ರಯಾನ 3 ರ ನೌಕೆಗಿಂತಲೂ ಮುಂಚೆ ಚಂದ್ರನ ಮೇಲೆ ಇಳಿಯುವ ಕನಸು ಹೊಂದಿದ್ದ ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆ ಅನಿಯಂತ್ರಿತ ಕಕ್ಷೆಗೆ ತಿರುಗಿದ ನಂತರ ಚಂದ್ರನಿಗೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ತಿಳಿಸಿದ್ದು, ರಷ್ಯಾದ ಚಂದ್ರನ ಮೇಲೆ ಇಳಿಯುವ ಕನಸು ನುಚ್ಚುನೂರಾಗಿದೆ.
ಲೂನಾ -25 ನೌಕೆಯು 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರಯಾನವಾಗಿದ್ದು, ಈ ಬಾರಿಯೂ ತನ್ನ ಗುರಿ ತಲುಪದೆ ಪತನವಾಗಿದೆ.
ಲೂನಾ -25 ಅನ್ನು ಪೂರ್ವ-ಲ್ಯಾಂಡಿಂಗ್ ಕಕ್ಷೆಗೆ ತಳ್ಳುವಲ್ಲಿ ಸಮಸ್ಯೆ ಇದೆ ಎಂದು ರೋಸ್ಕೋಸ್ಮೋಸ್ ವರದಿ ಮಾಡಿದ ಒಂದು ದಿನದ ನಂತರ ಈ ಅಪಘಾತ ಸಂಭವಿಸಿದೆ.
ಉಪಕರಣವು ಅನಿರೀಕ್ಷಿತ ಕಕ್ಷೆಗೆ ಚಲಿಸಿತು ಮತ್ತು ನಿಯಂತ್ರಣ ತಪ್ಪಿ ಚಂದ್ರನ ಮೇಲ್ಮೈಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅಸ್ತಿತ್ವವನ್ನು ಕಳೆದುಕೊಂಡಿತು” ಎಂದು ರೋಸ್ಕೋಸ್ಮೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 21 ರಂದು ಯೋಜಿತ ಟಚ್ ಡೌನ್ ಗೆ ಮುಂಚಿತವಾಗಿ ಮಿಷನ್ ಕಂಟ್ರೋಲ್ ಶನಿವಾರ 11:10 ಜಿಎಂಟಿಗೆ ನೌಕೆಯನ್ನು ಪೂರ್ವ-ಲ್ಯಾಂಡಿಂಗ್ ಕಕ್ಷೆಗೆ ಸಾಗಿಸಲು ಪ್ರಯತ್ನಿಸಿದ್ದರಿಂದ “ಅಸಹಜ ಪರಿಸ್ಥಿತಿ” ಸಂಭವಿಸಿದೆ ಎಂದು ಸಂಸ್ಥೆ ಹೇಳಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

