ಮುಂಬಯಿ-ಬೆಂಗಳೂರು ರೈಲ್ವೆ ನಿಲುಗಡೆಗೆ ಹಸಿರು ನಿಶಾನೆ
(Belapu) ಬೆಳಪು: ಬೆಳಪು ಮತ್ತು ಆಸುಪಾಸಿನ ಗ್ರಾಮಗಳ ಜನರ ಬಹುಕಾಲದ ಬೇಡಿಕೆಯಾದ ಬೆಳಪು ಗ್ರಾಮದ ಪಡುಬಿದ್ರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ಮುಂಬಯಿ ಮತ್ತು ಬೆಂಗಳೂರು ರೈಲುಗಳು ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗಬೇಕೆಂದು.
ಈ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಇದೀಗ ಇದಕ್ಕೆ ಕಾಯಕಲ್ಪ ದೊರಕುವ ಕಾಲ ಸನ್ನಿಹಿತವಾಗಿದ್ದು, ಪಡುಬಿದ್ರಿ ರೈಲ್ವೇ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಪ್ರಾರಂಭಗೊಂಡು, ಮುಂಬಯಿ-ಬೆಂಗಳೂರು ರೈಲು ನಿಲುಗಡೆಯ ಸೂಚನೆ ದೊರಕಿದೆ ಎಂದು ರೈಲ್ವೇ ಹೋರಾಟ ಸಮಿತಿಯ ಅಧ್ಯಕ್ಷ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ.
ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಬೆಳಪು ಗ್ರಾ.ಪಂ ವತಿಯಿಂದ 40 ಲಕ್ಷ ವೆಚ್ಚದಲ್ಲಿ ಸಂಪೂರ್ಣ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆಸುವುದರೊಂದಿಗೆ ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದೆ.
ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ಮುಂಬಯಿ-ಬೆಂಗಳೂರು ರೈಲು ನಿಲುಗಡೆ ಬಗ್ಗೆ ಬೆಳಪು, ಎಲ್ಲೂರು, ಮುದರಂಗಡಿ, ಮಜೂರು, ಕಾಪು, ಕುತ್ಯಾರು, ಉಚ್ಚಿಲ, ಬಡಾ, ಎರ್ಮಾಳ್ ತೆಂಕ, ಪಡುಬಿದ್ರಿ ಸಹಿತ ಹಲವಾರು ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡು ಸರಕಾರಕ್ಕೆ ಒತ್ತಡ ಹಾಕಲಾಗಿದೆ. ನೂರಾರು ಜನರು ಸೇರಿ ರೇಲ್ ರೋಖೋವನ್ನು ನಡೆಸಲಾಗಿತ್ತು. ಕೊಂಕಣ ರೈಲ್ವೇ ಅಧಿಕಾರಿಗಳಿಂದ ಸರ್ವೆ ಕಾರ್ಯ ಕೂಡ ನಡೆಸಲಾಗಿತ್ತು. ಆದರೆ ಯಾವುದೇ ಫಲ ನೀಡಿರಲಿಲ್ಲ.
ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರಿಗೆ, ಮಾಜಿ ರೈಲ್ವೇ ಸಚಿವರಾದ ಜಾರ್ಜ್ ಫೆರ್ನಾಂಡಿಸ್, ಕಾಂಗ್ರೆಸ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವರುಗಳಾದ ಲಾಲೂ ಪ್ರಸಾದ್ ಯಾದವ್, ಸದಾನಂದ ಗೌಡ ಸಹಿತ ಅನೇಕ ರೈಲ್ವೇ
ಸಚಿವರುಗಳಿಗೆ ನಿರಂತರ ಮನವಿ ನೀಡಲಾಗಿತ್ತು. ಜನಪ್ರತಿನಿಧಿಗಳಿಗೂ ಒತ್ತಡ ಹಾಕಲಾಗಿತ್ತು. ಈ ಸಂದರ್ಭ ರಾಜ್ ಕೋಟ್ ಎಕ್ಸ್ ಪ್ರೆಸ್ ನಿಲುಗಡೆಗೆ ಮಾತ್ರ ಅವಕಾಶವಾಗಿತ್ತು. ನಮ್ಮ ಬೇಡಿಕೆಗೆ ಸ್ಪಂದನೆ ದೊರಕಿಲ್ಲ. ಕೇರಳ ರಾಜ್ಯದಲ್ಲಿ ಪ್ರತಿ ನಿಲ್ದಾಣದಲ್ಲೂ ರೈಲು ನಿಲುಗಡೆಯಾಗುತ್ತಿತ್ತು. ಇಲ್ಲಿ ಏಕೆ ನಿಲುಗಡೆ ಇಲ್ಲ ಎಂದಾಗ ಅಧಿಕಾರಿಗಳಲ್ಲಿ ಉತ್ತರವಿರಲಿಲ್ಲ.
ಬೆಳಪುವಿನಲ್ಲಿ ಅಂತರಾಷ್ಟ್ರೀಯ ಮಟ್ಟದ ವಿದ್ಯಾ ಸಂಸ್ಥೆಗಳು, ಕೈಗಾರಿಕೆಗಳು ಸ್ಥಾಪನೆಯಾಗುತ್ತಿದೆ. ರೈಲ್ವೇ ನಿಲ್ದಾಣದ ಸುತ್ತಲೂ ಬೃಹತ್ ಕೈಗಾರಿಕೆ, ಉಡುಪಿ ಪವರ್ ಕಾರ್ಪೊರೇಶನ್, ಪಾದೂರು ಕ್ರೂಡ್ ಆಯಿಲ್, ಸುಜ್ಲಾನ್ ಸಹಿತ ಹತ್ತಾರು ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ.
ಸಾವಿರಾರು ಉತ್ತರ ಭಾರತದ, ಮಹಾರಾಷ್ಟ್ರದ ಜನ ಕಾರ್ಮಿಕರು ದುಡಿಯುತ್ತಿದ್ದಾರೆಂದು ಅಂಕಿ ಅಂಶಗಳೊಂದಿಗೆ ನಮ್ಮ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ನೀಡಿ ಸಾವಿರಾರು ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸುವಂತೆ ವಿನಂತಿಸಲಾಗಿತ್ತು.
ಸ್ಪಂದಿಸಿದ ಕೋಟ : ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ಮುಂಬಯಿ-ಬೆಂಗಳೂರು ರೈಲು ನಿಲ್ಲಿಸುವ ಬಗ್ಗೆ
ಅತೀವ ಉತ್ಸುಕರಾಗಿ ನಮ್ಮ ಮನವಿಗೆ ಸ್ಪಂದಿಸಿದ ಸಂಸದರಾದ ಕೋಟ ಶೀನಿವಾಸ ಪೂಜಾರಿಯವರು, ಆದಷ್ಟು ಶೀಘ್ರ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ 3 ಬಾರಿ ರೈಲ್ವೇ ಮಂತ್ರಿಗಳೊಂದಿಗೆ ಚರ್ಚಿಸಿ ಇದೀಗ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಾರಂಭಗೊಂಡಿದೆ. ಮುಂಬಯಿ-ಬೆಂಗಳೂರು ಸಹಿತ 3 ಎಕ್ಸ್ ಪ್ರೆಸ್ ರೈಲುಗಳು ಪಡುಬಿದ್ರಿ ನಿಲ್ದಾಣದಲ್ಲಿ ನಿಲ್ಲುವ ಸೂಚನೆ ದೊರಕಿದ್ದು, ಮುಂಬಯಿ-ಬೆಂಗಳೂರು ಸಹಿತ ದೇಶದ ವಿವಿಧ ಮೂಲೆಗಳಲ್ಲಿ ವಾಸಿಸುವ ನಮ್ಮೂರಿನ ಜನಕ್ಕೆ ದೊಡ್ಡ ಕೊಡುಗೆಯಾಗಿದೆ.
ಶಾಸಕರಾದ ಗುರ್ಮೆ ಸುರೇಶ ಶೆಟ್ಟಿಯವರು ಜನರ ಬೇಡಿಕೆಗೆ ಸ್ಪಂದಿಸಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿರುತ್ತಾರೆ. ಆದಷ್ಟು ಶೀಘ್ರ ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ಮುಂಬಯಿ-ಬೆಂಗಳೂರು ರೈಲು ನಿಲುಗಡೆಗೆ ಭಾಗ್ಯ ದೊರಕಲಿದೆಯೆಂದು ದೇವಿಪ್ರಸಾದ್ ಶೆಟ್ಟಿ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

