
ಅಕ್ರಮ – ಸಕ್ರಮದ ಜಿದ್ದಾಟದಲ್ಲಿ ಬಡವಾಗುತ್ತಿರುವ ಉಡುಪಿ ಜಿಲ್ಲೆ
(ಲೇಖನ: ಡಾ. ಸುಬ್ರಹ್ಮಣ್ಯ ಭಟ್. ಬೈಂದೂರು.)
ಉಡುಪಿ: ರಾಜ್ಯದೆಲ್ಲೆಡೆ ಜನರು ಒಂದು ರೀತಿಯಲ್ಲಿ ಯೋಚಿಸಿದರೆ ದಕ್ಷಿಣ ಕರಾವಳಿ ಜಿಲ್ಲೆಯವರು ಮತ್ತೊಂದು ರೀತಿ ಯೋಚಿಸುವುದು ಎನ್ನುವ ಅಪವಾದ ಇತ್ತೀಚೆಗೆ ಹೆಚ್ಚೆಚ್ಚು ಕೇಳಿ ಬರುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಗಳು, ಪ್ರಕರಣಗಳು, ಬೆಳವಣಿಗೆಗಳು ನಡೆಯುತ್ತಾ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಡುತ್ತಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದೂ ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು…! ಹಾಗಾಗಿಯೇ ಇಲ್ಲಿ ಹಿರಿಯ ಕಾಂಗ್ರೆಸ್ ನಾಯಕರಿದ್ದರೂ ಉಸ್ತುವಾರಿ ಸಚಿವರು ಹೊರಜಿಲ್ಲೆಯವರು…! ಇದರಿಂದ ಜಿಲ್ಲೆಯ ಜನಸಾಮಾನ್ಯರಿಗೇನು ತೊಂದರೆ…? ಅವರ ಜೀವನಕ್ಕೇನು ಸಮಸ್ಯೆಯಾಗುತ್ತದೆ..? ಸರಕಾರ ಯಾವುದೇ ಪಕ್ಷದ್ದು ಇದ್ದರೂ ಜನರು ತಮ್ಮ ಪಾಡಿಗೆ ತಾವು ಬದುಕಿದರೆ ಯಾರೇನು ಮಾಡುತ್ತಾರೆ…? ಎಂದೆಲ್ಲಾ ವಾದಿಸುವವರೂ ಇದ್ದಾರೆ.
ಇದರ ಜೊತೆಗೆ ಬಿಟ್ಟಿ ಭಾಗ್ಯಕ್ಕೆ ಬಗ್ಗುವ ಗುಲಾಮರು ನಾವಲ್ಲ ಎಂದು ಎದೆಯುಬ್ಬಿಸಿ, ಗುಟ್ಟುಗುಟ್ಟಾಗಿ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಗುಜರಾಯಿಸಿ ಬಂದ ಬಿಜೆಪಿ ಕಾರ್ಯಕರ್ತರ ಮಾತುಗಳನ್ನು ಕೇಳುತ್ತಿದ್ದೇವೆ.
ಇದೆಲ್ಲದರ ನಡುವೆ ಈಗ ಜಿಲ್ಲೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳು ಬಂದಿದ್ದಾರೆ, ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ, ಮಟ್ಕಾ, ಇಸ್ಪೀಟ್, ಕೋಳಿ ಅಂಕ ಸೇರಿದಂತೆ ಅಕ್ರಮಕ್ಕೆ ಕಡಿವಾಣ ಹಾಕುವತ್ತ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಹಾಗೆಂದು ಸಕ್ರಮವಾಗಿರುವ ಯಾವುದೇ ಚಟುವಟಿಕೆಗೆ ಅವರಿಂದ ಅಡ್ಡಿ ಆತಂಕಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಮರಳುಗಾರಿಕೆಗೆ ಪರಿಸರ ಸಂರಕ್ಷಣೆಯ ಕಾರಣದಿಂದ ಕಡಿವಾಣ ಬಿದ್ದಿತ್ತು. ಅದರಲ್ಲೂ ಕುಂದಾಪುರ, ಬೈಂದೂರು ಭಾಗವನ್ನು ಅಂದಿನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಅತೀಸೂಕ್ಷ್ಮ ಜೀವಿಗಳಿರುವ ವಲಯ ಎಂದೂ ಉಲ್ಲೇಖಿಸಿದ್ದರಿಂದ ಚೆನೈನ ಹಸಿರು ನ್ಯಾಯಪೀಠ ಇಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಅವಕಾಶವನ್ನು ನಿರಾಕರಿಸಿತ್ತು.
ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಮಾಡಿ, ಒಂದು ಲೋಡ್ ಮರಳು ಕೇವಲ ಎರಡು ಸಾವಿರ ರೂಪಾಯಿಗೆ ಸಿಗುವಂತೆ ಮಾಡುತ್ತೇವೆ ಎಂದು ಸ್ವತ: ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲರ ಬಾಯಿಂದಲೇ ಹೇಳಿಸಿತ್ತು.
2019 ರಲ್ಲಿ ಬಿಜೆಪಿ ಅಧಿಕಾರ ಹಿಡಿದು ಈಗ ನಾಲ್ಕು ವರ್ಷ ಕಳೆದರೂ ಯಾವ ಮರಳು ನೀತಿಯನ್ನೂ ಮಾಡದೇ ಅಕ್ರಮವಾಗಿ ಮರಳುಗಾರಿಕೆ ಮಾಡಲು ಅವಕಾಶ ನೀಡಿ, ತಮ್ಮ ಪಕ್ಷದ ಮುಖಂಡರೇ ಅದರ ನೇತೃತ್ವ ವಹಿಸುವಂತೆ ಮಾಡಿತು. ಇದರ ಪರಿಣಾಮವಾಗಿ ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ, ಕ್ರಶರ್, ಮಟ್ಕಾ, ಇಸ್ಪೀಟ್, ಕೋಳಿ ಅಂಕ, ಅಕ್ರಮ ಸರಾಯಿ ಮೊದಲಾದವು ಅವ್ಯಾಹತವಾಗಿ ನಡೆದು ಜನರು ಬೇಸತ್ತು ಹೋಗಿದ್ದರು. ಇದರಿಂದ ಹಣ ಮಾಡಿದ್ದು ಪೊಲೀಸರು, ಸಣ್ಣಪುಟ್ಟ ರಾಜಕೀಯ ಪುಡಾರಿಗಳು ಮತ್ತು ಅಕ್ರಮ ನಡೆಸುತ್ತಿದ್ದ ಧೈರ್ಯವಂತರು…! ಇದರಿಂದಾಗಿ ಬಿಜೆಪಿ ಪಕ್ಷಕ್ಕೆ ಇಂತಹ ಹೆಚ್ಚೆಚ್ಚು ಜನ ಆಕರ್ಷಿತರಾಗಿ ತನುಮನ ಧನ ಸಹಕಾರ ನೀಡಿ, ಕಳೆದ ಚುನಾವಣೆಯಲ್ಲೂ ತಮ್ಮ ಭವಿಷ್ಯದ ಅಕ್ರಮ ವ್ಯವಹಾರಕ್ಕಾಗಿ ಬಿಜೆಪಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತದ್ದು ಎಲ್ಲರಿಗೂ ತಿಳಿದ ವಿಚಾರ…! ಆದರೆ ಜಿಲ್ಲೆಯಲ್ಲಿ ಬಿಜೆಪಿ ಗೆದ್ದರೂ ರಾಜ್ಯದ ಅಧಿಕಾರ ಅವರ ಕೈಗೆ ಬರಲಿಲ್ಲ. ಅಲ್ಲಿಂದ ಪ್ರಾರಂಭವಾಯಿತು ಅಕ್ರಮ ನಡೆಸುವವರ ಪರದಾಟ…!
ಹೊಸ ಸರಕಾರ ಬಂದು ನಾಲ್ಕು ತಿಂಗಳಾಗುವ ಹೊತ್ತಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬದಲಾದರು. ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲೆಯ ಕುರಿತು ತುಸು ನಿಗಾ ಹೆಚ್ಚೇ ಇರಿಸುವ ಸದುದ್ದೇಶದಿಂದ ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಡಾ. ಅರುಣ್ ಕೆ. ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಿತು. ಅವರು ಜಿಲ್ಲೆಗೆ ಬರುತ್ತಾರೆ ಎಂದು ತಿಳಿದ ಅಕ್ರಮಗಳ ಸರದಾರರು ಕಾಂಗ್ರೆಸ್ ಪಕ್ಷದ ಸೋತ ಅಭ್ಯರ್ಥಿಗಳ ಮನೆಗೆ ಓಡೋಡಿ ಬಂದು ಹೇಗಾದರೂ ಮಾಡಿ ಅರುಣ್ ಕೆ ಅವರು ಇಲ್ಲಿಗೆ ಬರದಂತೆ ತಡೆಯಬೇಕೆಂದು ಅಂಗಲಾಚಿದ್ದು ಈಗ ಗುಟ್ಟಾಗಿ ಉಳಿದಿಲ್ಲ…! ಅದಕ್ಕೆ ಸ್ಪಂದಿಸಿದ ಜಿಲ್ಲೆಯ ಕೆಲವೊಂದು ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಅಕ್ರಮ ದಂಧೆಕೋರರ ಹಿತರಕ್ಷಣೆಗಾಗಿ ಸೆಟೆದು ನಿಂತು ಸಿ.ಎಂ. ವರೆಗೂ ಮನವಿ ಮಾಡಿಕೊಂಡರು. ಆದರೆ ಡಾ. ಅರುಣ್ ಕೆ. ಅವರನ್ನು ನೇಮಿಸುವಾಗಲೇ ದೃಢ ನಿಲುವು ತೆಗೆದುಕೊಂಡಿದ್ದ ಮುಖ್ಯಮಂತ್ರಿಗಳು, ಗೃಹಸಚಿವರು ಸುತಾರಾಂ ಇವರ ಮನವಿಗೆ ಸ್ಪಂದಿಸಲೇ ಇಲ್ಲ.
ಹಾಗಾಗಿ ಈಗ ಜಿಲ್ಲೆಗೆ ಅರುಣೋದಯವಾಗಿದೆ, ಕತ್ತಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಬೆಳಕಿಗೆ ತರುವ ಅರುಣನಾಗಿ ಈಗಿನ ಎಸ್ ಪಿ. ಅವುಗಳನ್ನು ನಿಲ್ಲಿಸುವತ್ತ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಇದೊಂದು ಉತ್ತಮ ನಿರ್ಧಾರ ಮತ್ತು ಬೆಳವಣಿಗೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಮಾತ್ರ ನಮ್ಮ ವಿರೋಧ ಕಾನೂನಾತ್ಮಕವಾಗಿದ್ದರೆ ನಮ್ಮ ಅಡ್ಡಿ ಆತಂಕಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳಲ್ಲಿ ಎರಡು ವಿಧದ ಅಕ್ರಮಗಳಿವೆ. ಒಂದನೆಯದು ಮಟ್ಕಾ, ಕೋಳಿ ಅಂಕ, ಅಕ್ರಮ ಸರಾಯಿ ಮಾರಾಟ, ಇಸ್ಪೀಟ್ ಇತ್ಯಾದಿಗಳು. ಇವುಗಳನ್ನು ನಿಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಇದನ್ನು ಎಲ್ಲರೂ ಒಕ್ಕೊರಲಿನಿಂದ ಸ್ವಾಗತಿಸುತ್ತೇವೆ. ಎರಡನೆಯದು ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ, ಕ್ರಶರ್ ಇತ್ಯಾದಿ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯವಾದ ವಸ್ತಗಳನ್ನು ಕಾನೂನುಬಾಹಿರವಾಗಿ ವಿಲೇವಾರಿ ಮಾಡುತ್ತಿರುವುದು. ಗಣಿಗಾರಿಕೆ, ಮರಳುಗಾರಿಕೆಗಳನ್ನು ಕಾನೂನಾತ್ಮಕವಾಗಿ ಸಕ್ರಮಗೊಳಿಸಲು ಅವಕಾಶ ಇದೆ. ಹಾಗಾಗಿ ಮರಳನ್ನು ಎಲ್ಲಿ, ಎಷ್ಟು, ಹೇಗೆ, ಯಾರು ತೆಗೆಯಬೇಕು ಎನ್ನುವ ಕುರಿತು ಪರಿಸರ ತಜ್ಞರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಒಂದೆಡೆ ಕುಳಿತು ಒಮ್ಮತದ ನಿರ್ಧಾರಕ್ಕೆ ಬಂದು ಹಸಿರುಪೀಠದ ಗಮನಕ್ಕೆ ತಂದು ಮರಳನ್ನು ತೆಗೆದು ಸ್ಥಳೀಯರಿಗೆ ಕಟ್ಟಡ ಕಾಮಗಾರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳ ಆಗಬೇಕಿದೆ. ಹಾಗೆಯೇ ಕೆಂಪುಕಲ್ಲು ಗಣಿಗಾರಿಕೆ ಮತ್ತು ಕ್ರಶರ್ ಅನ್ನು ಖಾಸಗಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯ ಪರವಾನಿಗೆಯೊಂದಿಗೆ ನಡೆಯುವಂತೆ ಮಾಡಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಮಾಡಬೇಕಾಗಿದೆ.
ಮಾನ್ಯ ಎಸ್.ಪಿಯವರು ಇತ್ತೀಚೆಗೆ ಎಂ ಸ್ಯಾಂಡ್ ಹಾಗೂ ಸಿಮೆಂಟ್ ಇಟ್ಟಿಗೆ ಬಳಸಿ ಕಟ್ಟಡ ಕಟ್ಟುವಂತೆ ಸಲಹೆ ನೀಡಿದ್ದಾರೆ. ಆದರೆ ಬಡವರು, ಕೆಳಮಧ್ಯಮ ವರ್ಗದ ಜನರಿಗೆ ಇವುಗಳನ್ನು ಕೊಂಡು ಮನೆ ಕಟ್ಟುವಷ್ಟು ಶಕ್ತಿ ಸಾಮರ್ಥ್ಯವಿಲ್ಲ. ಇದನ್ನು ಸರಕಾರ ಹಾಗೂ ಅಧಿಕಾರಿಗಳು ಮನಗಾಣಬೇಕಿದೆ.
ಸರಕಾರದ ಬಿಗಿ ನಿಲುವು ಹಾಗೂ ಅಧಿಕಾರಿಗಳ ಖಡಕ್ ನಿರ್ಧಾರದಿಂದ ಮರಳು, ಕೆಂಪು ಕಲ್ಲು, ಜಲ್ಲಿ ಮೊದಲಾದುವು ಜಿಲ್ಲೆಯಲ್ಲಿ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಕಟ್ಟಡ ಕಾರ್ಮಿಕರು, ಟಿಪ್ಪರ್ ಮಾಲಕರು, ದಿನಗೂಲಿ ಕಾರ್ಮಿಕರು ಬೀದಿಗೆ ಬರುತ್ತಾರೆ. ಅಕ್ಟೋಬರ್ ನಿಂದ ಮೇ ತಿಂಗಳ ವರೆಗೆ ಬಿರುಸಿನಿಂದ ನಡೆಯುವ ಕಟ್ಟಡ ಕಾಮಗಾರಿಗಳಿಗೆ ಮೂಲವಸ್ತುಗಳೇ ದೊರೆಯದಿದ್ದರೆ ಅವರುಗಳ ಗತಿಯೇನು…? ಬಡವರು ಮನೆ ಕಟ್ಟುವುದಾದರೂ ಹೇಗೆ..? ಕಾರ್ಮಿಕರ ದೈನಂದಿನ ಜೀವನದ ಪಾಡೇನು…? ಈ ಕುರಿತು ಸಹ ಸಂಬಂಧಪಟ್ಟವರು ಯೋಚಿಸಬೇಕಿದೆ.
ತಳಸಮುದಾಯದ ಜನರ ಬದುಕಿನ ಕುರಿತು ಮೇಲ್ಪದರದಲ್ಲಿರುವ ಅಧಿಕಾರಿಗಳು, ರಾಜಕಾರಣಿಗಳು ಅರೆಕ್ಷಣವಾದರೂ ಯೋಚಿಸಿ. ಸಮಸ್ಯೆ ಇದೆಯೆಂದು ಅಗತ್ಯವಿರುವುದನ್ನು ಸಿಗದಂತೆ ಮಾಡಿದರೆ ಬದುಕು ದುಸ್ತರವಾದೀತು. ಅದರ ಬದಲಿಗೆ ಸಮಸ್ಯೆಯನ್ನು ಪರಿಹರಿಸುವತ್ತ ಎಲ್ಲರೂ ಗಮನ ಹರಿಸಿ.
ಕೊನೆಯದಾಗಿ ಹೇಳುವುದಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆ ನಿಜವಾಗಲೂ ಸ್ವಾಗತಾರ್ಹವಾದುದು, ಆದರೆ ಮೊದಲು ಪೊಲೀಸ್ ಇಲಾಖೆಯಲ್ಲೇ ಅಕ್ರಮಗಳಿಗೆ ಹಿಂದಿನಿಂದ ಮಾಮೂಲಿ ಪಡೆದು ಪ್ರೋತ್ಸಾಹಿಸುವ ಅಧಿಕಾರಿಗಳ ಕುರಿತು ನಿಗಾ ವಹಿಸಬೇಕಿದೆ.
ರಾಜಕಾರಣಿಗಳ ಒತ್ತಡವಿದೆಯೆಂದು ಒಂದು ಪಕ್ಷದವರಿಗೆ ಅಕ್ರಮಕ್ಕೆ ಅವಕಾಶ ನೀಡಿ, ಮತ್ತೊಂದು ಪಕ್ಷದವರಿಗೆ ಅವಕಾಶ ನಿರಾಕರಿಸುವ ಕ್ರಮ ಬೇಡ. ಏಕೆಂದರೆ ಅಕ್ರಮ ಯಾರೇ ಮಾಡಿದಿದ್ದರೂ ಅದು ಅಕ್ರಮವೇ…!
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರೇ ತಾವು ಒತ್ತಡಕ್ಕೆ ಮಣಿಯಬೇಡಿ, ಆದರೆ ನಮ್ಮ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನಸಾಮಾನ್ಯರ ಬದುಕಿನ ಕುರಿತು ಒಂಚೂರು ಗಮನ ಹರಿಸಿ. ಹೊಟ್ಟೆ ತುಂಬಿದವರ ಕುರಿತು ನಮ್ಮ ಚಿಂತೆಯಲ್ಲ ಹಸಿದವರ ಒಡಲು ತಂಪಾಗಿಸುವ ಪ್ರಯತ್ನ ನಮ್ಮದಾಗಬೇಕು ಅಷ್ಟೇ….
