ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
(Adamaru) ಅದಮಾರು; ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪಬ್ಲಿಕ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉನ್ನತ ಶ್ರೇಣಿ ವಿಜೇತರಿಗೆ ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಹರಸಿದರು.
ಅವರು ಈ ಸಂದರ್ಭ ಮಾತನಾಡಿ, ಪೂರ್ಣಪ್ರಜ್ಞಾದ ವಿದ್ಯಾರ್ಥಿಯೊಬ್ಬ ಮುಂದೊಂದು ದಿನ ಒಲಂಪಿಕ್ ನಲ್ಲಿ ಬಹುಮಾನ ಅಥವಾ ನೋಬೆಲ್ ಪ್ರಶಸ್ತಿಗೆ ಭಾಜನರಾಗಬೇಕೆಂಬ ಅಪೇಕ್ಷೆ ನಮ್ಮದು. ಅಲ್ಲದೆ ದೇಶದ ಉನ್ನತ ಸ್ಥಾನದಲ್ಲಿ ಅಲಂಕರಿಸುವ ಯೋಗ ನಮ್ಮ ವಿದ್ಯಾರ್ಥಿಗಳ ಪಾಲಾಗಲಿ ಎಂದು ಆಶೀರ್ವಚನವಿತ್ತರು.
ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ ಹಾಗೂ ನೀಟ್ ಮೊದಲಾದ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 19 ವಿದ್ಯಾರ್ಥಿಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ವಿಜೇತರಾದವರನ್ನೂ ಸನ್ಮಾನಿಸಲಾಯಿತು.
ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕೋಶಾಧಿಕಾರಿ ಸಿ.ಎ ಗಣೇಶ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನಕ್ಕೆ ಉತ್ತರವಾಗಿ ಗೌರಿಶಂಕರ, ದಕ್ಷಾ ಜೆ. ಶೆಟ್ಟಿ, ಕೃತಿ.ಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅದಮಾರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊಫೆಸರ್. ನಿತ್ಯಾನಂದ, ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಎ. ವಿ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
10ನೆ ತರಗತಿ ವಿದ್ಯಾರ್ಥಿನಿ ಅಪೂರ್ವ ಸ್ವಾಗತಿಸಿದಳು. ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೃತಿ.ಜಿ ವಂದಿಸಿದರು.

