ಅದಾನಿ ಪೌಂಡೇಷನ್ ನಿಂದ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಯಶಸ್ವಿ: ಐಕಳ ಕಂಬಳದಲ್ಲಿ ಉದ್ಘಾಟನೆ.
(Udupi) ಉಡುಪಿ: ಕರಾವಳಿ ಭಾಗದಲ್ಲಿ ಹಲವಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದ ಗ್ರಾಮೀಣ ಕ್ರೀಡೆಯಾದ ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಗೆ ರೂ. ೧೦ ಲಕ್ಷ ಅನುದಾನ ನೀಡಿತ್ತು. ಈ ಅನುದಾನಡಿಯಲ್ಲಿ ಕೋಣಗಳ ಓಟದ ಪ್ರಾರಂಭಿಕ ಹಂತದಲ್ಲಿ ನೂತನ ತಂತ್ರಜ್ಞಾನದ ಸ್ವಯಂಚಾಲಿತ ಸಮಯ ಗೇಟ್ ಹಾಗೂ ಓಟದ ಸಮಾಪ್ತಿಯಲ್ಲಿ ಫೊಟೋ ಫಿನಿಶ್ ಫಲಿತಾಂಶ ವ್ಯವಸ್ಥೆಗಳನ್ನು ಶನಿವಾರ ನಡೆದ ಐಕಳ ಕಂಬಳದಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಅಳವಡಿಕೆ ಯಶಸ್ವಿಯಾಗಿದೆ.
ಈ ಹೈಟೆಕ್ ತಂತ್ರಾಂಶವಾದ ಸ್ವಯಂಚಾಲಿತ ಸಮಯ ಗೇಟನ್ನು ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ (MLC Kota Srinivasa Poojary), ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ (ADANI Foundation President Kishore Alva) ಅವರು ಉದ್ಘಾಟಿಸಿದರು.
ಫೊಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮದ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ (DR MN Rajendra Kumar) ಅವರು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು (DR Deviprasad Shetty).
ಈ ಸಂದರ್ಭದಲ್ಲಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡೆ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುತ್ತಾ ಬಂದಿರುವ ಅದಾನಿ ಸಮೂಹ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ರೂ. ೧೦ ಲಕ್ಷದ ವಿಶೇಷ ಅನುದಾನವನ್ನು ಜಿಲ್ಲಾ ಕಂಬಳ ಸಮಿತಿಗೆ ನೀಡಿದ್ದು, ಹೈಟೆಕ್ ವ್ಯವಸ್ಥೆಯು ಐಕಳ ಕಂಬಳೋತ್ಸವದಲ್ಲಿ ಯಶಸ್ವಿಯಾಗಿ ಉದ್ಘಾಟನೆಗೊಂಡಿರುವುದು ಕಂಬಳ ಆಯೋಜಕರಿಗೆ ಮತ್ತು ಪ್ರೇಮಿಗಳಿಗೆ ಹರ್ಷಕರವಾಗಿದೆ ಎಂದರು.
ಈ ವ್ಯವಸ್ಥೆಗಳಿಂದ ಕಂಬಳದ ಸಮಯ ಪೋಲಾಗದಂತೆ ಹಾಗೂ ನಿಖರ ಫಲಿತಾಂಶ ತಿಳಿಯ ಬಹುದಾಗಿದೆ. ಇತಿಹಾಸ ಪ್ರಸಿದ್ಧ ಕಂಬಳ ಕ್ರೀಡೆಯು ಅಂತರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗಬೇಕಿದೆ. ಮೊದಲ ಬಾರಿಗೆ ಅಳವಡಿಸಲಾಗಿರುವ ಈ ತಂತ್ರಜ್ಞಾನವನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಉನ್ನತ ದರ್ಜೆಗೆ ನವೀಕರಿಸಬೇಕು ಎಂದು ಆಳ್ವ ಹೇಳಿದ್ದಾರೆ.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

