ಅದಾನಿ ಫೌಂಡೇಷನ್ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ರೂ. 1.50 ಕೋಟಿ ಅನುದಾನ
(Udupi) ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿ ತನ್ನ ಸಿಎಸ್‌ಆರ್ ಯೋಜನೆಗಳನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಸಭಾ ಭವನಕ್ಕೆ ರೂ. 25 ಲಕ್ಷ ಅನುದಾನವನ್ನು ನೀಡಲಾಯಿತು.
ಅನುದಾನದ ಚೆಕ್‌ನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವ(Adani President Kishore Alva) ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಎಂ ಮೋಹನ್ ಆಳ್ವ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮೋಹನ್ ಆಳ್ವ(DR M Mohan Alva), ಕರಾವಳಿ ಭಾಗದಲ್ಲಿ ಇಲ್ಲಿಯ ತನಕ ಯಾವುದೇ ಖಾಸಗಿ ಸಂಸ್ಥೆಯವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅನುದಾನ ನೀಡಿಲ್ಲ. ಆದರೆ ಇಂದು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಹಲವಾರು ಕೈಗಾರಿಕೆ ಹಾಗೂ ಸೇವಾ ಉದ್ಯಮಗಳಲ್ಲಿ ನಿರ್ವಹಿಸುತ್ತಿರುವ ಅದಾನಿ ಸಂಸ್ಥೆಯು ನಮ್ಮ ಕರಾವಳಿ ಭಾಗದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಯಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಹಲವು ತರಹದ ಅನುದಾನವನ್ನು ನೀಡಿ ಸ್ಕೌಡ್ಸ್ ಗೈಡ್ಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದರು.
ಮಂಗಳೂರಿನಲ್ಲಿ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳನ್ನು ಬಲಪಡಿಸಲು ಹಾಗೂ ಯುವ ಪೀಳಿಗೆಗೆ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಸ್ಕೌಟ್ಸ್ ಗೈಡ್ಸ್ ಸ್ವಯಂಸೇವಕರಿಗೆ ತರಬೇತಿಯನ್ನು ನೀಡಲು ಒಂದು ಸಭಾ ಭವನದ ಅವಶ್ಯಕತೆ ಇದ್ದು, ಆ ಅವಶ್ಯಕತೆಯನ್ನು ಅದಾನಿ ಸಮೂಹದ ವತಿಯಿಂದ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದ್ದೆವು. ಇಂದು ಆ ಬೇಡಿಕೆಯನ್ನು ಅದಾನಿ ಫೌಂಡೇಷನ್ ರೂ. 25 ಲಕ್ಷ ಅನುದಾನವನ್ನು ನೀಡುವುದರ ಮೂಲಕ ಈಡೇರಿಸಿದೆ.
ಅದಾನಿ ಸಂಸ್ಥೆಯು ಕರಾವಳಿ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಸಾಮಾಜಿಕ ಬೆಳವಣಿಗೆಗೆ ಅನುಷ್ಠಾನಗೊಳಿಸಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೂ ಉಡುಪಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಬೃಹತ್ ತರಬೇತಿ ಕೇಂದ್ರಕ್ಕೆ ಆವರಣ ಗೋಡೆ, ಮೂಡಬಿದ್ರಿಯ ಸಭಾಂಗಣಕ್ಕೆ ಸಿಎಸ್‌ಆರ್‌ನ ಪ್ರಯೋಜನಗಳನ್ನು ಪಸರಿಸಿದೆ ಎಂದು ಮೋಹನ್ ಆಳ್ವ ಹೇಳಿದ್ದಾರೆ.
ಅನುದಾನದ ಚೆಕ್ಕನ್ನು ಹಸ್ತಾಂತರಿಸಿದ ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯುವ ಪೀಳಿಗೆಗೆ ಒಂದು ಮಾದರಿ ಸಂಸ್ಥೆಯಾಗಿದ್ದು, ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಒಂದು ಶಕ್ತಿ ಮತ್ತು ಪ್ರೇರಣೆಯಾಗಿದೆ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಲು ಅದಾನಿ ಸಮೂಹವು ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಗೆ ನೆರವು ನೀಡುತ್ತಾ ಬಂದಿದೆ.
ಈ ಹಿಂದೆ, ಶ್ರೀಮತಿ ಶಾಂತ ಆಚಾರ್ಯ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ವಲಯ ತಂಡದೊAದಿಗೆ ಯುಪಿಸಿಎಲ್ ಸ್ಥಾವರಕ್ಕೆ ಭೇಟಿ ನೀಡಿ, ಉಡುಪಿ ಮಣಿಪಾಲದಲ್ಲಿ ಸ್ಥಾಪಿತವಾಗಿರುವ ಡಾ. ವಿ.ಎಸ್. ಆಚಾರ್ಯ ಭಾರತ್ ಸ್ಕೌಟ್ಸ್ ಗೈಡ್ಸ್ ತರಬೇತಿ ಕೇಂದ್ರ ಹಾಗೂ ನೇಚರ್ ಕ್ಯಾಂಪ್‌ನ ಬಗ್ಗೆ ಮಾಹಿತಿ ನೀಡಿ, ಕೇಂದ್ರ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಕೆಲವು ಮೂಲಭೂತ ಸೌಕರ್ಯದ ಅವಶ್ಯಕತೆ ಇರುವ ಬಗ್ಗೆ ವಿವರಣೆ ನೀಡಿದ್ದರು.
ತರಬೇತುದಾರದಲ್ಲಿ ಮಹಿಳಾ ತರಬೇತುದಾರರೂ ಇರುವುದರಿಂದ ಅವರ ಸುರಕ್ಷತೆಗೆ ತರಬೇತಿ ಕೇಂದ್ರಕ್ಕೆ ಆವರಣ ಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಅದಾನಿ ಯುಪಿಸಿಎಲ್‌ಗೆ ಮನವಿ ಮಾಡಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಡಾ. ವಿ.ಎಸ್. ಆಚಾರ್ಯ ಅವರ ಕನಸ್ಸಾಗಿದ್ದು, ಈ ರೀತಿಯ ತರಬೇತಿ ಕೇಂದ್ರ ಮೈಸೂರು ಜಿಲ್ಲೆಯಲ್ಲಿ ಹೊರತು ಪಡಿಸಿದರೆ ಬೇರೆ ಯಾವುದೇ ಸ್ಥಳಗಳಲ್ಲಿ ಇಲ್ಲವಾದುದರಿಂದ, ಈ ಕೇಂದ್ರವು ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರಿಗೆ ಅನುಕೂಲವಾಗಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಅದಾನಿ ಫೌಂಡೇಶನ್ ತರಬೇತಿ ಕೇಂದ್ರಕ್ಕೆ ರೂ. 80 ಲಕ್ಷ ವೆಚ್ಚದಲ್ಲಿ ಆವರಣ ಗೋಡೆಯನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಮೂಡಬಿದ್ರಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದ ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರಿಗೆ ಸಮಾಜಮುಖಿ ಕೆಲಸಗಳಿಗೆ ಕೈಜೋಡಿಸಲು ಅನುಕೂಲವಾಗಲು ಹಾಗೂ ತರಬೇತಿ ನೀಡಲು ಸಭಾಭವನದ ಅವಶ್ಯಕತೆಯನ್ನು ಪರಿಗಣಿಸಿ ಮೂಡಬಿದ್ರಿ ತಾಲೂಕಿನ ಮಧ್ಯಭಾಗದಲ್ಲಿ ಸಭಾಭವನವನ್ನು ನಿರ್ಮಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅದಾನಿ ಫೌಂಡೇಶನ್ ರೂ. 38 ಲಕ್ಷ ಅನುದಾನ ನೀಡಿದ್ದು, ಜನತೆಗೆ ಅನುಕೂಲವಾಗಿದೆ ಎಂದು ಕಿಶೋರ್ ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅದಾನಿ ಅನುದಾನವು ಉಡುಪಿ ಹಾಗೂ ಮೂಡಬಿದ್ರಿ ತಾಲೂಕಿಗೆ ಸೀಮಿತವಲ್ಲದೆ, ಮಂಗಳೂರು ತಾಲೂಕಿಗೂ ಒಂದು ಸಭಾಭವನದ ಅವಶ್ಯಕತೆಯನ್ನು ಪರಿಗಣಿಸಿ ಮಂಗಳೂರು ತಾಲೂಕಿಗೂ ಅನುದಾನವನ್ನು ವಿಸ್ತರಿಸಿದೆ.
ಅದಾನಿ ಸಮೂಹವು ಕರಾವಳಿ ಭಾಗದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಒಟ್ಟು ರೂ. 1.50 ಕೋಟಿಯಷ್ಟು ಅನುದಾನವನ್ನು ಇಲ್ಲಿಯ ತನಕ ನೀಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನಾಧಿಕಾರಿ ಪ್ರದೀಪ್, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ವಸಂತ ರಾವ್, ಜಿಲ್ಲಾ ಸ್ಕೌಟ್ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಮಂಗಳೂರು ಉತ್ತರ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಕಿಣಿ, ಮಂಗಳೂರು ದಕ್ಷಿಣ ನಗರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸುಫಲ, ಜಿಲ್ಲಾ ಸಹಾಯಕ ಆಯುಕ್ತರಾದ ನವೀನ್ ಚಂದ್ರ ಅಂಬೂರಿ, ಫೆಲ್ಸಿ ಫೆರ್ನಾಂಡೀಸ್, ರಾಹುಲ್ ತೋನ್ಸೆ, ಅವಿನ್ ಕಜೆಕಾರ್, ಮಂಗಳೂರು ನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮೋಹಿನಿ ರಾಮಚಂದ್ರ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್, ಅದಾನಿ ಸಮೂಹದ ಏಜಿಎಂ ರವಿ ಜೇರೆ (Ravi Jere) ಉಪಸ್ಥಿತರಿದ್ದರು.

