ಅನ್ಯಕೋಮಿನ ಯುವಕನ ಮೇಲೆ ತಲವಾರು ಝಳಪಿಸಿದ ಗುಂಪು – 24 ಗಂಟೆಯೊಳಗೆ ಆರೋಪಿಗಳು ಅಂದರ್
ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯ ಕೋಮಿನ ಯುವಕನ ಮೇಲೆ ಮೂವರ ಗುಂಪೊಂದು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಂಗಳೂರಿನ ಪಂಚಮೊಗರು ನಿವಾಸಿ ಚರಣ್ ರಾಜ್(23), ಸುರತ್ಕಲ್‌ನ ಸುಮಂತ್ ಬರ್ಮನ್(23), ಸುಂಕದಕಟ್ಟೆ ಕೋಡಿಕಲ್ ನಿವಾಸಿ ಅವಿನಾಶ(24) ಎಂದು ಗುರುತಿಸಲಾಗಿದೆ.
ಭಾನುವಾರ( ಆ.20)ರಂದು ಎಮ್.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ಅನ್ಯಕೋಮಿನ ಯುವಕ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಆತನನ್ನು ತಡೆದು ಆತನಿಗೆ ತಲವಾರಿನಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ಯುವಕನ ಮುಖಕ್ಕೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯುವಕ ನೀಡಿದ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಯೊಳಗೆ ತಲವಾರು, ವಾಹನ ಸಮೇತ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಪ್ರಕರಣವನ್ನು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ರವರ ಸಲಹೆಯಂತೆ ತನಿಖಾ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳ ವಿರುದ್ಧ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿದೆ. ಚರಣ್ ರಾಜ್ ಮೇಲೆ ಊರ್ವಾ ಪೊಲೀಸ್ ಠಾಣೆಯಲ್ಲಿ-1, ಕಾವೂರು ಠಾಣೆಯಲ್ಲಿ- 1, ಪಣಂಬೂರು ಪೊಲೀಸ್ ಠಾಣೆಯಲ್ಲಿ-3 ಪ್ರಕರಣಗಳು ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದೆ.
ಸುಮಂತ್ ಬರ್ಮನ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ-1, ಬರ್ಕೆ ಪೊಲೀಸ್ ಠಾಣೆಯಲ್ಲಿ-1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ-2 ಪ್ರಕರಣಗಳು ಒಟ್ಟು 14 ಪ್ರಕರಣಗಳು ದಾಖಲಾಗಿದೆ. ಅವಿನಾಶ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ-4, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ-1 ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದೆ. ಅದಲ್ಲದೆ ಈತನ ವಿರುದ್ಧ ಉರ್ವಾ ಪೊಲೀಸ್ ಠಾಣೆಯಿಂದ ಗಡಿಪಾರು ಆದೇಶವಿದೆ.

