ಆಧ್ಯಾತ್ಮ ಮತ್ತು ಜ್ಞಾನವೇ ಎಲ್ಲಕ್ಕಿಂತ ದೊಡ್ಡ ಸಂಪತ್ತು : ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
(Bantwala) ಬಂಟ್ವಾಳ : ಅಧ್ಯಾತ್ಮ ಮತ್ತು ಜ್ಞಾನವೇ ಎಲ್ಲಕ್ಕಿಂತ ದೊಡ್ಡ ಸಂಪತ್ತಾಗಿದೆ. ಭಗವಂತನು ಎಲ್ಲೆಡೆ ಇದ್ದಾನೆಯಾದರೂ ನಮಗೆ ಆರಾಧನೆಗೆ ಸುಲಭವಾಗಲು ದೇವಸ್ಥಾನಗಳ ನಿರ್ಮಾಣವಾಗಿವೆ. ಸನಾತನ ಧರ್ಮದ ಅರ್ಥವೇ ತ್ಯಾಗವಾಗಿದೆ ಎಂದು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.
ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ
ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಡೆದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು,
ನಮ್ಮ ಪಾರಮಾರ್ಥಿಕ ಸಾಧನೆಗಾಗಿ ಯಾವುದನ್ನು ಪಡೆಯಬೇಕೋ ಅಂತಹ ವಿಷಯವನ್ನು ಪಡೆದುಕೊಳ್ಳಲು ಬೇಕಾದ ಪರಿಸರ ನಿರ್ಮಾಣ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆಯೇ ಹಿಂದೂ ರಾಷ್ಟ್ರ. ಯಾರು ಸನ್ಮಾರ್ಗದಲ್ಲಿ ಚಲಿಸುತ್ತಾರೋ ಅವರು ಶ್ರೇಷ್ಠ ಎನಿಸುತ್ತಾರೆ ಮತ್ತು ಯಾರು ಇದರ ವಿರುದ್ಧ ಇದ್ದಾರೋ ಅವರು ದುಷ್ಪರೆನಿಸಿಕೊಳ್ಳುತ್ತಾರೆ ಎಂದರು.
ಹಿಂದೂಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಆಧ್ಯಾತ್ಮಿಕ ಸಾಧನೆ ಮತ್ತು ಹಿಂದೂ ರಾಷ್ಟ್ರ:
ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ವೈಚಾರಿಕ ಆಕ್ರಮಣ ನಡೆಯುತ್ತಿದ್ದು,ಇದಕ್ಕೆ ನರೇಟಿವ್ ವಾರ್ ಎಂದು ಹೇಳಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಸನಾತನ ಸಂಸ್ಥೆಯು ಸನಾತನ ಸ್ಟಡಿ ಸೆಂಟರ್ ಎಂಬ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ. ಇದರ ಸಹಾಯದಿಂದ ಆನೇಕ ವಕ್ತಾರರು ಟಿ.ವಿ. ಚಾನಲ್‌ಗಳಲ್ಲಿ ಹಿಂದೂ ವಿರೋಧಿ ಷಡ್ಯಂತ್ರವನ್ನು ಖಂಡಿಸುತ್ತಿದ್ದಾರೆ. ಅರ್ಬನ್ ನಕ್ಸಲವಾದದ ನಿಜವಾದ ಮುಖವಾಡವನ್ನು ಹಿಂದೂ ಸಮಾಜದ ಮುಂದೆ ಕಳಚಲಾಗುತ್ತಿದೆ ಎಂದರು.
ಮೆಕಾಲೆ ಶಿಕ್ಷಣ ಪದ್ಧತಿ, ಹಿಂದೂ ಅವಿಭಕ್ತ ಕುಟುಂಬದ ಸರ್ವನಾಶ ಮತ್ತು ಕೌಟುಂಬಿಕ ಮೌಲ್ಯಗಳ ಅಧಃಪತನ, ಭಾರತೀಯ ನಾಗರಿಕತ್ವವನ್ನು ತ್ಯಜಿಸುವವರ ಪ್ರಮಾಣದಲ್ಲಿ ಹೆಚ್ಚಳ ಹೀಗೆ ಅನೇಕ ಸಮಸ್ಯೆಗಳು ಸಮಾಜವನ್ನು ಕಾಡುತ್ತಿದ್ದು, ಇದರ ಪರಿಹಾರಕ್ಕೆ ಆಧ್ಯಾತ್ಮಿಕ ಸಾಧನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕಾಗಿದೆ ಎಂದು ರಮಾನಂದ ಗೌಡ ಅವರು ತಿಳಿಸಿದರು.
ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಧರ್ಮಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಬುದ್ಧಿಜೀವಿಗಳು ಮತ್ತು ಅಧಿಕಾರದ ಬಲವಿರುವವರು ಸಮಾಜದಲ್ಲಿ ಅಸ್ಥಿರತೆಯನ್ನು ನಿರ್ಮಾಣ ಮಾಡುತ್ತಿರುವ ಸಂಧಿಗ್ಧ ಪರಿಸ್ಥಿತಿಯಲ್ಲಿ ದೇಶ ಮತ್ತು ಧರ್ಮವನ್ನು ಉಳಿಸಲು ಜನಸಾಮಾನ್ಯರಲ್ಲಿ ಧರ್ಮಜಾಗೃತಿ ಮೂಡಿಸಲು ಹಗಲು, ರಾತ್ರಿ ಪರಿಶ್ರಮ ಪಡುತ್ತಿದ್ದು, ಇಂತಹ ಸಂಸ್ಥೆಯೊಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕಾಗಿದೆ ಎಂದು ನುಡಿದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಅಂಬಿಕಾ ವಿಶ್ವವಿದ್ಯಾಲಯದ ಸುಬ್ರಹ್ಮಣ್ಯ ನಟೋಜ, ಮಾಜಿ ಏರ್ ಮಾರ್ಷಲ್ ರಮೇಶ್ ಕಾರ್ಣಿಕ್, ಡಾ ಶ್ರೀಧರ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ವಿಟ್ಲ ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್‌ನ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ದನ ಇಡ್ಯಾ, ಸಮಿತಿ ವಕ್ತಾರ ಮೋಹನ್ ಗೌಡ ಹಾಗೂ ವೈದ್ಯರು, ವಕೀಲರು, ಉದ್ಯಮಿಗಳು ಸೇರಿ 800ಕ್ಕೂ ಅಧಿಕ ಮಂದಿ ಅಧಿವೇಶನದಲ್ಲಿ ಭಾಗವಹಿಸಿದರು.

