ಈ ಬಾರಿ ಅಷ್ಠಮಿಗೆ ರವಿ ಕಟಪಾಡಿ ವೇಷ ಇಲ್ಲ
ಅನಾರೋಗ್ಯದಿಂದ ಈ ವರ್ಷ ವೇಷ ಹಾಕೊಲ್ಲ : ರವಿ ಕಟಪಾಡಿ
(Katapady) ಕಟಪಾಡಿ: ಅನಾರೋಗ್ಯದ ಕಾರಣ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ವೇಷ ಧರಿಸುವುದಿಲ್ಲ ಎಂದು ಅಷ್ಠಮಿಯ ಎರಡು ದಿನಗಳ ಕಾಲ ವೇಷ ಧರಿಸಿ ಅದರಿಂದ ಲಭಿಸಿದ ಕೋಟ್ಯಾಂತರ ರುಪಾಯಿ ಹಣವನ್ನು ಮಕ್ಕಳ ಶುಶ್ರೂಷೆಗಾಗಿ ನೀಡಿರುವ ರವಿ ಕಟಪಾಡಿ ಹೇಳಿದ್ದಾರೆ.
ಈ ಸಂದರ್ಬ ವಿಡಿಯೋ ಬಿಡುಗಡೆಗೊಳಿಸಿದ ರವಿ ಕಟಪಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಪ್ರತಿ ವರ್ಷದಂತೆ ಈ ಬಾರಿ ರವಿಕಟಪಾಡಿಯ ವೇಷದ ಕುತೂಹಲ ಇರಬಹುದು. ಸತತ ಹತ್ತು ವರ್ಷಗಳಿಂದ ವೇಷ ಹಾಕಲು ಮಾಧ್ಯಮಗಳ ಪಾತ್ರ ಅವಿಸ್ಮರಣೀಯ. ಒಟ್ಟು ರೂ. 1 ಕೋಟಿ 70 ಲಕ್ಷ ಹಣವನ್ನು ಸುಮಾರು 182 ಮಕ್ಕಳ ಆರೋಗ್ಯ ವೆಚ್ಚಕ್ಕೆ ಅನುವು ಮಾಡಲಾಗಿದೆ.
ಇದಕ್ಕೆ ಊರ ಪರವೂರ ಜನರ ಸಹಾಯವಿದೆ. ಈ ಬಾರಿ ಸೆ.14 ಮತ್ತು 15 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಈ ಬಾರಿ ವೈದ್ಯರ ಸೂಚನೆಯಂತೆ ಆರೋಗ್ಯ ಸಮಸ್ಯೆಯಿಂದ ಒಂದು ವರ್ಷ ವೇಷ ಹಾಕುತ್ತಿಲ್ಲ.
ಶಾಲೆ, ಮನೆ ಬಳಿ ವೇಷಕ್ಕಾಗಿ ಕಾಯುತ್ತಿದ್ದ ಮಕ್ಕಳ ಬಳಿ ಹಾಗೂ ಸಮಸ್ತ ನಾಗರಿಕರಲ್ಲಿ ಮೊದಲು ಕ್ಷಮೆ ಯಾಚಿಸುತ್ತಿದ್ದೇನೆ. ಈ ಬಾರಿ ರವಿ ಫ್ರೆಂಡ್ಸ್ ಕಟಪಾಡಿ ತಂಡದವರು ಕೂಡ ವೇಷ ಹಾಕುತ್ತಿಲ್ಲ.
ಫಂಡ್ ಕಲೆಕ್ಷನ್ ಗೆ ಬರುತ್ತಿಲ್ಲ. ನಮ್ಮ ಹೆಸರು ಹೇಳಿಕೊಂಡು ಯಾರಾದರೂ ಬಂದಲ್ಲಿ ನೀವೇ ಅವರಲ್ಲಿ ಸರಿಯಾಗಿ ವಿಚಾರಿಸಿಕೊಳ್ಳಿ ಎಂದೂ ರವಿ ಕಟಪಾಡಿ ಹೇಳಿದ್ದಾರೆ.
ಈ ಒಂದು ವರ್ಷ ನನ್ನನ್ನು ಕ್ಷಮಿಸುವಂತೆ ರವಿ ಕಟಪಾಡಿ ಹೇಳಿದ್ದಾರೆ.ರವಿ ಕಟಪಾಡಿಯವರು ಸ್ಪೈಡರ್ ಮ್ಯಾನ್, ಅವತಾರ್, ಲಿಝಾಡ್೯ ಮ್ಯಾನ್, ಆಕ್ಟೋಪಸ್, ಜಾನ್ ಕಾರ್ಟರ್, ಮೋನ್ಸ್ಟರ್, ಅಮೇಜಿಂಗ್ ಮೋನ್ಸ್ಟರ್, ಅವತಾರ್ 2 ಡಾಕ್೯ ವನ್ ಎಲೈಟ್, ಮಮ್ಮಿ, ಡೆಮೊನ್, ಕ್ರಾಂಪಸ್ ಸಿ ಸಹಿತ 14ವೇಷ ಧರಿಸಿದ್ದಾರೆ.

