ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ ಮರ್ಮೈಡ್’ ಅಂದರೆ ಮತ್ಸ್ಯಕನ್ಯೆ ವೇಷ
1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ , ಈಬಾರಿ 15 ಲಕ್ಷ ರೂ. ನಿರೀಕ್ಷೆ
(Katapadi) ಕಟಪಾಡಿ: ಸುಮಾರು ಹತ್ತು ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸುಮಾರು 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಮರ್ಮೈಡ್’ ಅಂದರೆ ಮತ್ಸ್ಯಕನ್ಯೆಯಾಗಿದ್ದಾರೆ.
ಮಕ್ಕಳ ಪಾಲಿಗೆ ಸೇವಾ ಶಕ್ತಿಯಾದ ರವಿಯವರಿಗೂ ಕಳೆದ ವರ್ಷ ಅನಾರೋಗ್ಯ ಕಾಡಿತ್ತು. ವೇಷ ಹಾಕಲು ಸಾಧ್ಯವಾಗಿಲಿಲ್ಲ. ವೈದ್ಯರು ಈ ಬಗ್ಗೆ ಜಾಗರೂಕರಾಗಿರುವಂತೆ ತಿಳಿಸಿದ್ದರೂ, ಸೇವಾ ತುಡಿತದ ರವಿಯವರು ಈ ಬಾರಿ ಕೊನೆಯ ಬಾರಿ ವೇಷ ಹಾಕುತ್ತೇನೆ ಎಂಬ ಆಶಾ ಭಾವನೆಯಿಂದ ಈ ಬಾರಿ ‘ಮರ್ಮೈಡ್’ ಅಂದರೆ ಮತ್ಸ್ಯಕನ್ಯೆ ವೇಷ ಧರಿಸಿ ಉಡುಪಿಯಲ್ಲಿ ಸೆ. 4 ಮತ್ತು 5ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ, ಕಟಪಾಡಿ, ಬ್ರಹ್ಮಾವರ, ಮಲ್ಪೆ ಪರಿಸರದಲ್ಲಿ ತಂಡದೊಂದಿಗೆ ರೋಡ್ ಶೋ ನಡೆಸಲಿದ್ದಾರೆ.
ಆ ನಿಮಿತ್ತ ಗುರುವಾರ ರಾತ್ರಿಯಿಂದ ಕಟಪಾಡಿ ಮಟ್ಟುವಿನ ಅಂಬಾಡಿ ಪ್ರಸಾದ್ ರೇಖಾ ದಂಪತಿಯ ಮನೆಯಲ್ಲಿ ವೇಷಕ್ಕಾಗಿ ತಯಾರಿ ಪ್ರಾರಂಭಿಸಿ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ತಮ್ಮ ತಂಡದ ಸುಮಾರು 80ಕ್ಕೂ ಅಧಿಕ ಸ್ವಯಂಸೇವಕರೊಂದಿಗೆ ಹೊರಟ್ಟಿದ್ದಾರೆ.
ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ, ಕೊರಗಜ್ಜ ಸನ್ನದಾನದಲ್ಲಿ ಪ್ರಾರ್ಥಿಸಿ ತಮ್ಮ ಸಮಾಜ ಸೇವೆಯ ಕಾರ್ಯ ಆರಂಭಿಸಿದ್ದಾರೆ.
ಈ ಬಾರಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಸುಮಾರು 6 ಮಕ್ಕಳಿಗೆ ಚಿಕಿತ್ಸೆಗೆ ಸುಮಾರು 15 ಲಕ್ಷ ರೂ. ಸಂಗ್ರಹಿಸಿ ನೀಡುವ ಗುರಿ ಹೊಂದಿದ್ದಾರೆ.
ಸಿದ್ಧಿ ವಿನಾಯಕ ಆಟ್೯ ಕಾಪು ಇದರ ತುಷಾರ್ ಅಂಚನ್ ನೇತೃತ್ವದಲ್ಲಿ 4ಜನರ ತಂಡ ರವಿ ಕಟಪಾಡಿ ವೇಷದಲ್ಲಿ ಕಲಾಗಾರಿಕೆ ನೀಡಿದ್ದಾರೆ.
ಈ ಸಂದರ್ಭ ರವಿ ಕಟಪಾಡಿ ತಂಡದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು

