ಉಚ್ಚಿಲ : ಹಾವೇರಿ ಮೂಲದ ಕೂಲಿ ಕಾರ್ಮಿಕ ನಾಪತ್ತೆ
ಪಡುಬಿದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲು
(Padubidri) ಪಡುಬಿದ್ರಿ : ಹಾವೇರಿ ಮೂಲದ ಕೂಲಿ ಕಾರ್ಮಿಕ ನಾಪತ್ತೆಯಾದ ಘಟನೆ ಉಚ್ಚಿಲ ಬಡಾ ಗ್ರಾಮದಲ್ಲಿ ಘಟಿಸಿದೆ.
ನಾಪತ್ತೆಯಾದ ವ್ಯಕ್ತಿ ಗುಡ್ಡೆನೆಗೌಡ ಹಾಲನೇಗೌಡ ಹಳೇಗೌಡ (41) ಎಂದು ತಿಳಿದು ಬಂದಿದೆ.
ಗುಡ್ಡೆನೆಗೌಡ ಸುಮಾರು 10 ವರ್ಷಗಳಿಂದ ಪಡುಬಿದ್ರಿ, ಕಾಪು ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ಎರಡು ಮೂರು ತಿಂಗಳಿಗೊಮ್ಮೆ ತಮ್ಮ ಊರಿಗೆ ಹೋಗಿ ಬರುತ್ತಿದ್ದರು.
ಸುಮಾರು 6 ತಿಂಗಳ ಹಿಂದೆ ಇವರ ಹೆಂಡತಿ ಮಕ್ಕಳೊಂದಿಗೆ ಮನೆ ಬಿಟ್ಟು ತವರು ಮನೆಗೆ ತೆರಳಿದ್ದು, ಆ ಬಳಿಕ ಗುಡ್ಡೆನೆಗೌಡ ಮಾನಸಿಕವಾಗಿ ನೊಂದಿದ್ದರು.
ಜ. 30ರಂದು ಬೆಳಿಗ್ಗೆ ಉಚ್ಚಿಲದಿಂದ ಗೋಪಿನಾಥ್ ಎಂಬವರು ಅಣ್ಣ ಮಾಲತೇಶನಿಗೆ ಕರೆಮಾಡಿ ನಿಮ್ಮ ಅಣ್ಣ ಗುಡ್ಡೆನೆಗೌಡರವರು ಹುಚ್ಚುಚ್ಚಾಗಿ ವರ್ತಿಸಿರುವ ಬಗ್ಗೆ ತಿಳಿಸಿದ್ದಾರೆ. ನಿಮ್ಮ ಅಣ್ಣನನ್ನು ಊರಿಗೆ ಕಳುಹಿಸಲು ರೂ.500 ಹಾಕಲು ತಿಳಿಸಿದಂತೆ ಹಣವನ್ನು ಕಳುಹಿಸಿ, ಫೋನಿನಲ್ಲಿ ಗುಡ್ಡೆನೆಗೌಡರವರ ಜೊತೆಗೂ ಮಾತನಾಡಿದ್ದಾರೆ. ಆ ಬಳಿಕ ಗೋಪಿನಾಥ್ ರವರು ಬೆಳಿಗ್ಗೆ ಗುಡ್ಡೆನೆಗೌಡ ರವರನ್ನು ಬಸ್ಸಿನಲ್ಲಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಗುಡ್ಡೆನೆಗೌಡ ಊರಿಗೂ, ಉಡುಪಿಯ ಚಿಕ್ಕಮ್ಮನ ಮನೆಗೂ ಹೋಗದೆ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಾಪತ್ತೆಯಾಗಿರುತ್ತಾರೆ.
ಈ ಬಗ್ಗೆ ಪುಟ್ಟಣ್ಣಗೌಡ ಹೆಚ್ ಹಳೇಗೌಡರ್ ಎಂಬುವವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಈ ಚೆಹರೆಯ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಈ 0802555452 ಸಂಖ್ಯೆಗೆ ಮಾಹಿತಿ ನೀಡಲು ಕೋರಿದ್ದಾರೆ.

