ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆ ಅವ್ಯವಸ್ಥೆ: ಸಾರ್ವಜನಿಕರಿಂದ ಆಕ್ರೋಶ
(Udupi) ಉಡುಪಿ: ನಗರದ ಅಜ್ಜರ ಕಾಡುವಿನಲ್ಲಿರುವ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಹೇಳಿದರೆ, ಇಲ್ಲಿನ ವೈದ್ಯಾಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ರೋಗಿಗಳ ಸಂಬಂಧಿಕರು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ ಘಟನೆ ಘಟಿಸಿದೆ.
ಅಜ್ಜರಕಾಡುವಿನ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿದ್ದು, ಸದ್ಯ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಆದರೆ ಹಳೆಯ ಸರ್ಕಾರಿ ಆಸ್ಪತ್ರೆ ಇನ್ನೂ ಮೇಲ್ದರ್ಜೆಗೆ ಏರಿಲ್ಲ. ಮುಖ್ಯವಾಗಿ ಐಸಿಯುನಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಗಂಭೀರ ಕಾಯಿಲೆ ಇರುವ ರೋಗಿಗಳು ಅಥವಾ ತುರ್ತು ವಿಭಾಗಕ್ಕೆ ಬಂದಾಗ ಇಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಇಲ್ಲಿನ ವೈದ್ಯಾಧಿಕಾರಿಗಳು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ ಎಂಬ ಉತ್ತರ ನೀಡುತ್ತಾರೆ. ಐಸಿಯುನಲ್ಲಿ ಬೆಡ್ ಬಗ್ಗೆ ವಿಚಾರಿಸಿದರೆ, ಐಸಿಯು ನಲ್ಲಿರುವ ರೋಗಿ ಸತ್ತ ಮೇಲೆ ನಿಮಗೆ ಬೆಡ್ ಕೊಡುತ್ತೇವೆ ಎಂಬ ಉಡಾಫೆ ಉತ್ತರ ನೀಡಿದ್ದಾಗಿ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉಡುಪಿ ಶಾಕಕ ಯಸ್ಪಾಲ್ ಸುವರ್ಣ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

