ಉಡುಪಿ: “ಒಂದು ಹೆಜ್ಜೆ ರಕ್ತದಾನಿ ಬಳಗ” ಮೈಸೂರು ಇದರ ಉಡುಪಿ ಜಿಲ್ಲಾ ಪೋಸ್ಟರ್ ಬಿಡುಗಡೆ
(Udupi) ಉಡುಪಿ: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಾಯಾರ್ಥವಾಗಿ ರಾಷ್ಟ್ರಮಟ್ಟದ ಕರೋಕೆ ಗಾಯನ ಹಾಗೂ ಕರುನಾಡ ಸೇನಾನಿಗಳ ವೇದಿಕೆಯ ಅಂಗ ಸಂಸ್ಥೆಯಾದ “ಒಂದು ಹೆಜ್ಜೆ ರಕ್ತದಾನಿ ಬಳಗ” ಮೈಸೂರು ಇದರ ಅಂಗ ಸಂಸ್ಥೆ ಉಡುಪಿ ಜಿಲ್ಲಾ ಪೋಸ್ಟರನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆಯನ್ನು ಮಾಡಿದ ಜೋಸೆಫ್ ಲೊಬೋ ಶಂಕರ್ ಪುರ, ನಟ ಹಾಗೂ ನಿರ್ದೇಶಕ ಸೋಮನಾಥ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಮಿಂಚಿದ ಬಾಲ ಪ್ರತಿಭೆ ಆಯುಷ್ ಮೆನೇಜಸ್, ರಿಸೆಲ್ ಮೆಲ್ಬಾ ಕ್ರಾಸ್ತಾರವರನ್ನು ಶಾಸಕರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭ ರಾಷ್ಟ್ರ ಮಟ್ಟದ ಕರೋಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಕ್ತದಾನದ ಬಗ್ಗೆ “ಒಂದು ಹೆಜ್ಜೆ ರಕ್ತದಾನಿ” ಬಳಗ ಮೈಸೂರು ಇದರ ಸ್ಥಾಪಕಾಧ್ಯಕ್ಷ ರಕ್ತದಾನಿ ಮಂಜು ಮಾತನಾಡಿ, ಸತತ ನಾಲ್ಕು ವರ್ಷದಿಂದ ಒಂದು ಹೆಜ್ಜೆ ರಕ್ತದಾನ ಬಳಗವನ್ನು ಮೈಸೂರು ಬೆಂಗಳೂರಿನಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸುತ್ತಾ ಬಂದಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ಯುವಕ, ಯುವತಿಯರು ರಕ್ತದಾನ ಮಾಡಬೇಕಿದೆ ಎಂದರು.
ಉಡುಪಿ ಜಿಲ್ಲೆಯ ರಕ್ತದಾನಿ ಬಳಗದ ನೀಮ ಲೋಬೋರವರು ಏಳು ಬಾರಿ ರಕ್ತದಾನ ಮಾಡಿದ್ದು, ಅವರಿಗೆ ʼಕರುನಾಡ ರಕ್ತ ಸೇನಾನಿʼ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಸಾದ್ ರೈ, ನಟ ಹಾಗೂ ನಿರ್ದೇಶಕರಾಗಿರುವ ಶ್ರೀ ನಂದನ್ ಬೆಂಗಳೂರು, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಆನಂದ್ ಕಲ್ಪತರು, ಉಡುಪಿ ಕರೋಕೆ ಮ್ಯೂಸಿಕಲ್ ಕ್ಲಬ್ ನ ಸಂಸ್ಥಾಪಕ ಮದನ್ ಮಣಿಪಾಲ್, ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಸಂಸ್ಥಾಪಕ ಪ್ರಕಾಶ್ ಕಾಮತ್, ರಾಷ್ಟ್ರ ಹಾಗೂ ರಾಜ್ಯಮಟ್ಟದ ಗಾಯಕ ವಿಲ್ಫೆಡ್ ವಿಜಯ ಡೇಸ ಶಂಕರಪುರ, ಪತ್ರಕರ್ತ ಹಾಗೂ ಕಲಾವಿದ ಪ್ರಕಾಶ್ ಸುವರ್ಣ ಕಟಪಾಡಿ, ಕಲಾವಿದರಾಗಿರುವ ನಾಗೇಶ್ ಕಾಮತ್ ಕಟ್ಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಂಗೀತಗಾರರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

