(Udupi) ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮಾಜಿ ಸಚಿವ ಉಡುಪಿಯ ಪ್ರಮೋದ್ ರಾಜ್ ಒಬ್ಬರಾಗಿದ್ದು, ಅವರಿಗೆ ಹೈಕಮಾಂಡ್ ಟಿಕೇಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್‌ಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಾವೂ ಒಬ್ಬರೆಂದು ಈ ವರ್ಷದ ಜೂನ್‌ನಲ್ಲಿ ಪ್ರಮೋದ್ ಮದ್ವರಾಜ್ ಹೇಳಿದ್ದರು. ಅಂದಿನಿಂದ ಅವರು ತಮ್ಮ ಉಮೇದುವಾರಿಕೆಗಾಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಅವರು ಚಿಕ್ಕಮಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು, ಬೂತ್ ಮಟ್ಟದಲ್ಲಿ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಕ್ಕರೆ ಕಷ್ಟವಾಗುತ್ತದೆ. ಹೀಗಾಗಿ ಬೂತ್ ಮಟ್ಟದ ನಾಯಕರ ಜತೆ ಜನ ಸಂಪರ್ಕ ಆರಂಭಿಸಿದ್ದೇನೆ ಎಂದು ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.
ಪ್ರಮೋದ್ ಮಧ್ವರಾಜ್‌ರವರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದು, ಕಾಂಗ್ರೆಸ್‌ನಿಂದ ಭ್ರಮನಿರಸನಗೊಂಡು 2022 ರ ಮೇ ತಿಂಗಳಲ್ಲಿ ಬಿಜೆಪಿ ಸೇರಿದ್ದಾರೆ.
ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಕ್ಷಿಯಾಗಿದ್ದರು. ಆದರೆ, ಪಕ್ಷವು ಯಶಪಾಲ್ ಸುವರ್ಣ ಅವರಿಗೆ ಮಣೆ ಹಾಕಿದ್ದು, ಯಶ್ಪಾಲ್ ಗೆಲುವು ಸಾಧಿಸಿದ್ದರು.
2016-18ರ ನಡುವೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದರು. ಅವರು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸಿ ಅಗಾಧ ಅನುಭವ ಪಡೆದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಉಡುಪಿಯಿಂದ ಬಿಜೆಪಿಯ ಕೆ ರಘುಪತಿ ಭಟ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಶೋಭಾ ಕರಂದ್ಲಾಜೆ ವಿರುದ್ಧ ಸೋತಿದ್ದರು.
ಇದೀಗ ಪ್ರಮೋದ್ ಮಧ್ವರಾಜ್‌ರವರು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಪಕ್ಷದ ಲೋಕಸಭಾ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

