ಉಡುಪಿ : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯಕ್ಕೆ ಚಾಲನೆ
ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ
(Udupi) ಉಡುಪಿ: ಶೀರೂರು ಮಠಾಧೀಶ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಭಾನುವಾರ ಮುಂಜಾನೆ ನಗರದ ಜೋಡುಕಟ್ಟೆಯಿಂದ ಮಠದವರೆಗೆ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗಿನ ಜಾವ ಕಾಪುವಿನ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಪೂರೈಸಿ ಜೋಡುಕಟ್ಟೆಗೆ ಬಂದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು.
ವಾದ್ಯ, ಕೊಂಬು ಮೊದಲಾದ ಮಂಗಳವಾದ್ಯಗಳ ನಿನಾದ ಮುಗಿಲು ಮಟ್ಟಿತ್ತು. ಸಿಡಿಮದ್ದುಗಳನ್ನೂ ಸಿಡಿಸಲಾಯಿತು.
ಜೋಡುಕಟ್ಟೆಯಲ್ಲಿ ಶ್ರೀಪಾದರು ದೇವರಿಗೆ ಪೂಜೆ ಸಲ್ಲಿಸಿ, ಅಲಂಕೃತ ಮೇನೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮೆರವಣಿಗೆ ಆರಂಭವಾಯಿತು.
ಇತರ ಮಠಗಳ ಯತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ತಟ್ಟಿರಾಯ, ಕೀಲು ಕುದುರೆ, ವಿವಿಧ ವೇಷಧಾರಿಗಳು, ಕುಣಿತ ಭಜನಾ ತಂಡ, ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಮೆರವಣಿಗೆ ರಥಬೀದಿ ತಲುಪಿದಾಗ ಶ್ರೀಪಾದರು ಮೇನೆಯಿಂದ ಇಳಿದು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡಿದರು. ಬಳಿಕ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕೃಷ್ಣಮಠ ಪ್ರವೇಶಿಸಿ ನವರತ್ನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದರು.
ನಿರ್ಗಮನ ಪುತ್ತಿಗೆ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಪರ್ಯಾಯ ಪ್ರಕ್ರಿಯೆ ಪೂರ್ಣಗೊಳಿಸಿ, ಶೀರೂರು ಮಠಾಧೀಶ ಶ್ರೀ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ಅಧಿಕಾರ ಹಸ್ತಾಂತರಿಸಿದರು.
ಇಂದಿನಿಂದ ಎರಡು ವರ್ಷಗಳ ಕಾಲ ಶೀರೂರು ಮಠಾಧೀಶ ಶ್ರೀ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.

