ಉಡುಪಿ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸಕೀರ್ತನೆ ಗಾಯನ
ವಿಶ್ವದಾಖಲೆ ನಿರ್ಮಿಸಿದ ವಿದುಷಿ ಸಂಗೀತ ಬಾಲಚಂದ್ರರಿಗೆ ‘ಗೀತಾ ಗಂಗೋತ್ರಿ’ ಬಿರುದು
(Udupi) ಉಡುಪಿ :ಉಡುಪಿಯ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಕೀರ್ತನೆಗಳನ್ನು ಗಾಯನ ಮಾಡುವ ಮೂಲಕ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಶ್ರೀಕೃಷ್ಣನ ಸನ್ನಿಧಿಯಲ್ಲಿ ಹರಿನಾಮ ಸಂಕೀರ್ತನೆಯ ಮೂಲಕ ಮೂಡಿಬಂದ ಈ ಅಪೂರ್ವ ಸಂಗೀತ ಸಾಧನೆ ಉಡುಪಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ದಾಖಲಿಸಿದೆ.
ಭಾನುವಾರ ಬೆಳಿಗ್ಗೆ 6.30ಕ್ಕೆ ಶ್ರೀ ಪುತ್ತಿಗೆ ಮಠದ ಭಗವದ್ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಆರಂಭಗೊಂಡ ಸಂಗೀತ ಬಾಲಚಂದ್ರ ಅವರ ನಿರಂತರ ದಾಸವಾಣಿ ಗಾಯನ ಸೋಮವಾರ ಬೆಳಿಗ್ಗೆ ಸುಮಾರು 7.40ಕ್ಕೆ ಮಂಗಳವಾಯಿತು. ಕೊನೆಯಲ್ಲಿ ‘ಕೃಷ್ಣ ಏನ ಬಾರದೆ’ಎಂಬ ದಾಸರ ಪದವನ್ನು ಭಕ್ತಿಭಾವದಿಂದ ಹಾಡಿದ ಅವರು ತಮ್ಮ 25 ಗಂಟೆಗಳ ಕಂಠಸಿರಿಯನ್ನು ಉಡುಪಿಯ ಶ್ರೀಕೃಷ್ಣ–ಮುಖ್ಯಪ್ರಾಣ ದೇವರಿಗೆ ಸಮರ್ಪಿಸಿ ಧನ್ಯರಾದರು.
ಕೇವಲ ದಾಸರ ಪದಗಳು ಮತ್ತು ಕೀರ್ತನೆಗಳ ಮೂಲಕ ಸತತ 25 ಗಂಟೆಗಳ ಕಾಲ ಹರಿನಾಮ ಸ್ಮರಣೆ ನಡೆಸಿರುವುದು ಈ ಸಾಧನೆಯ ವಿಶೇಷತೆ. ಪಕ್ಕವಾದ್ಯ ಕಲಾವಿದರ ಸುಶ್ರಾವ್ಯ ಸಹಕಾರದೊಂದಿಗೆ ಒಂದರ ಹಿಂದೆ ಒಂದರಂತೆ ದಾಸಕೀರ್ತನೆಗಳನ್ನು ಪ್ರಸ್ತುತಪಡಿಸಿದ ಸಂಗೀತ ಬಾಲಚಂದ್ರ ಅವರು ತಮ್ಮ ಸಂಗೀತ ಸಾಧನೆಯನ್ನು ಭಗವಂತನಿಗೆ ಅರ್ಪಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.
ಈ ಐತಿಹಾಸಿಕ ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಲು ಆಗಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಏಷ್ಯಾ ಹೆಡ್ ಡಾ. ಮನೀಷ್ ವಿಶ್ನೋಯಿ ಅವರು ವಿಶ್ವದಾಖಲೆಯನ್ನು ಘೋಷಿಸಿ ಪ್ರಮಾಣಪತ್ರವನ್ನು ನೀಡಿದರು. ಬಳಿಕ ಪೂಜ್ಯ ಶ್ರೀಪಾದರು ವಿಶ್ವದಾಖಲೆಯ ಪ್ರಮಾಣಪತ್ರವನ್ನು ವಿದುಷಿ ಸಂಗೀತ ಬಾಲಚಂದ್ರ ಅವರಿಗೆ ಹಸ್ತಾಂತರಿಸಿ ಆಶೀರ್ವದಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪರಮಪೂಜ್ಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬೆಳಗ್ಗೆಯೇ ತಮ್ಮ ಪೂಜಾನುಷ್ಠಾನಗಳನ್ನು ಪೂರೈಸಿ ಗೀತಾ ಮಂದಿರಕ್ಕೆ ಆಗಮಿಸಿದರು. ಸಂಗೀತ ಬಾಲಚಂದ್ರ ಅವರ ದಾಸವಾಣಿ ಗಾಯನವನ್ನು ಆಲಿಸಿದ ಶ್ರೀಪಾದರು, ವಿಶ್ವದಾಖಲೆಯ ಅಂತಿಮ ಕೀರ್ತನೆಯಾದ ‘ಕೃಷ್ಣ ಏನ ಬಾರದೆ’ ಪದವನ್ನೂ ಆಲಿಸಿ ಕಲಾವಿದೆಯನ್ನು ಪ್ರೋತ್ಸಾಹಿಸಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರಮಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೂಚಿಸಿದ ‘ಗೀತಾ ಗಂಗೋತ್ರಿ’ಎಂಬ ವಿಶೇಷ ಬಿರುದನ್ನು ವಿದುಷಿ ಸಂಗೀತ ಬಾಲಚಂದ್ರ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.
ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ‘ಗೀತಾ ಗಂಗೋತ್ರಿ’ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು. ಗೀತಾ, ಗಂಗೆ, ಗೋವಿಂದ ಮತ್ತು ಗೋವು — ಇವುಗಳ ಪವಿತ್ರ ಸ್ಮರಣೆ ಈ ಬಿರುದಿನಲ್ಲಿ ಅಡಕವಾಗಿದೆ. ಗಂಗೋತ್ರಿಯಿಂದ ಗಂಗೆಯು ನಿರಂತರವಾಗಿ ಪ್ರವಹಿಸುವಂತೆ ಸಂಗೀತ ಬಾಲಚಂದ್ರ ಅವರ ಕಂಠದಿಂದ ದಾಸಸಾಹಿತ್ಯ ಮತ್ತು ಭಕ್ತಿಸಂಗೀತದ ಗಂಗೆ ನಿರಂತರವಾಗಿ ಹರಿದು, ಜನರಲ್ಲಿ ಭಕ್ತಿ ಮತ್ತು ಭಾವವನ್ನು ಜಾಗೃತಗೊಳಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿದುಷಿ ಸಂಗೀತ ಬಾಲಚಂದ್ರ ಅವರನ್ನು ಶಾಲು ಹೊದಿಸಿ, ಕಿರೀಟ ಹಾಗೂ ಹಾರ ಹಾಕಿ ವಿಶೇಷವಾಗಿ ಅಭಿನಂದಿಸಲಾಯಿತು. ಅವರ ಮಾತಾ–ಪಿತೃಗಳಾದ ಶ್ರೀಮತಿ ಗೀತಾ ಪುರಾಣಿಕ ಹಾಗೂ ಶ್ರೀ ವೇದವ್ಯಾಸ ಪುರಾಣಿಕ ಅವರನ್ನೂ ಶ್ರೀಪಾದರು ಗೌರವಿಸಿ ಆಶೀರ್ವದಿಸಿದರು. 25 ಗಂಟೆಗಳ ನಿರಂತರ ಗಾಯನಕ್ಕೆ ಸಹಕಾರ ನೀಡಿದ ಪಕ್ಕವಾದ್ಯ ಕಲಾವಿದರನ್ನೂ ಶಾಲು ಹೊದಿಸಿ ಗೌರವಿಸಲಾಯಿತು.
ವಿದುಷಿ ಸಂಗೀತ ಬಾಲಚಂದ್ರ ಅವರ ಸಾಧನೆಗೆ ಕೀಬೋರ್ಡ್ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸು, ಕೊಳಲು ವಾದನದಲ್ಲಿ ಸಂತೋಷ್ ವಿಟ್ಟಲ್ ಅವರು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶ್ರೀಮತಿ ವಿಜಯಾ ನಾಗರಾಜ ಆಚಾರ್ಯ ಹಾಗೂ ಶ್ರೀಮತಿ ಲಕ್ಷ್ಮೀ ಪ್ರಸನ್ನ ಆಚಾರ್ಯ ಅವರು ವಿದುಷಿಯನ್ನು ಗೌರವಿಸಿ ಅಭಿನಂದಿಸಿದರು. ಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಶ್ರೀ ನಾಗರಾಜ ಆಚಾರ್ಯ ಮತ್ತು ಶ್ರೀ ಪ್ರಸನ್ನ ಆಚಾರ್ಯ ಅವರು ವೇದಿಕೆಗೆ ಬರಮಾಡಿಕೊಂಡರು.
ಭೀಮಾ ಜುವೆಲರ್ಸ್ ಪ್ರಾಯೋಜಕತ್ವದಲ್ಲಿ ನಡೆದ ಈ ಐತಿಹಾಸಿಕ ಸಂಗೀತ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಸಂಗೀತಾಭಿಮಾನಿಗಳು, ಶ್ರೀಕೃಷ್ಣ ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ಶ್ರೀಕೃಷ್ಣನ ಸನ್ನಿಧಿಯಲ್ಲಿ 25 ಗಂಟೆಗಳ ಕಾಲ ನಿರಂತರವಾಗಿ ದಾಸ ಸಾಹಿತ್ಯದ ಕೀರ್ತನೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿರುವ ‘ಗೀತಾ ಗಂಗೋತ್ರಿ’ವಿದುಷಿ ಸಂಗೀತ ಬಾಲಚಂದ್ರ ಅವರ ಸಾಧನೆ ದಾಸ ಸಾಹಿತ್ಯ ಮತ್ತು ಭಕ್ತಿಸಂಗೀತದ ಇತಿಹಾಸದಲ್ಲಿ ಸ್ಮರಣೀಯ ಮೈಲಿಗಲ್ಲಾಗಿ ಮೂಡಿಬಂದಿದೆ.

