ಉಡುಪಿ ಶ್ರೀಕೃಷ್ಣ ಮಾಸೋತ್ಸವ: ಅಗಸ್ಟ್ 1ರಿಂದ 11 ರವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ, ಮಾರಾಟ

(Udupi) : ಉಡುಪಿ : ಉಡುಪಿಯ ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಿ ಆಗಸ್ಟ್ 1ರಿಂದ ಸೆಪ್ಟೆಂಬರ್ 11ರ ವರೆಗೆ ವೈಭವದ ಕೃಷ್ಣ ಜನ್ಮ ದಿನೋತ್ಸವ ಸಂಭ್ರಮದಿಂದ ನಡೆಯಲಿದೆ.
ಇದರ ಮೊದಲ ಭಾಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾಸಂಘ ಉಡುಪಿ ಇವರ ಆಯೋಜನೆಯಲ್ಲಿ ಶ್ರೀಕೃಷ್ಣ ಮಾಸೋತ್ಸವದ ಅಂಗವಾಗಿ ಅಗಸ್ಟ್ 1ರಿಂದ 11 ರ ವರೆಗೆ ಕೈಮಗ್ಗ ಸೀರೆ ಮತ್ತು ಬಟ್ಟೆ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಪರಮಪೂಜ್ಯ ಪರ್ಯಾಯ ಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಆಗಸ್ಟ್ 1 ರಿಂದ 11 ರ ವರೆಗೆ ಪದ್ಮಶಾಲಿ ನೇಕಾರ ಪ್ರತಿಸ್ಥಾನ, ಶ್ರೀ ಕೃಷ್ಣ ಲೀಲೋತ್ಸವ ಎಂಬ ಹಲವಾರು ಕಾರ್ಯಕ್ರಮ ನಡೆಸಿಕೊಡುತ್ತಿದೆ. ಪದ್ಮ ಶಾಲಿಗಳು ಮಾಡುವುದು ಇದೊಂದು ಶ್ರೀ ಕೃಷ್ಣನ ಸೇವೆ ಎಂದು ಸ್ವಾಮೀಜಿ ಗಳು ನುಡಿದರು.
ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ ಉಡುಪಿ ರಾಜಾಂಗಣದಲ್ಲಿ ನಡೆಯುತ್ತಿದ್ದು, ಪದ್ಮ ಶಾಲಿಗಳು ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗಿದ್ದೀರಿ. ನಮಗೂ ಬಹಳ ಸಂತೋಷವಾಗಿದೆ. ನಿಮ್ಮ ಎಲ್ಲಾ ಉದ್ದೇಶಗಳು ಫಲಕಾರಿಯಾಗಲಿ ಭಗವಂತ ಅನುಗ್ರಹಿಸಲಿ ಎಂದು ಆಶೀರ್ವಾದ ನೀಡಿದರು.
ಉಡುಪಿ ನಗರ ಸಭೆಯ ಆಯುಕ್ತ ರಾಯಪ್ಪ , ಜಗದೀಶ್ ಶೆಟ್ಟಿಗಾರ್ ಆತ್ರಾಡಿ, ಮಾಜಿ ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರರಾದ ಪ್ರಭಾಕರ ನಾಯಕ್ ಅಮ್ಮುಂಜೆ, ಕಿಶೋರ್ ಕುಮಾರ್, ಪುರುಷೋತ್ತಮ ಶೆಟ್ಟಿ, ಗಣೇಶ್ ಪಾಟೀಲ್, ಹರಿಯಪ್ಪ ಕೋಟ್ಯಾನ್, ಡಾ ಚಂದನ್ ಶೆಟ್ಟಿಗಾರ್, ಇಂದ್ರಾಳಿ ರತ್ನಾಕರ ಶೆಟ್ಟಿಗಾರ್ ಮತ್ತು ಪದ್ಮಶಾಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸದಸ್ಯರು ಮತ್ತು ಪದ್ಮ ಶಾಲಿ ಸಮಾಜದ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

