• Home  
  • ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ (Shri Krishna Janmashtami was celebrated with festivity at Shri Krishna Math, Udupi)
- ಧಾರ್ಮಿಕ - ಪ್ರಚಲಿತ

ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ (Shri Krishna Janmashtami was celebrated with festivity at Shri Krishna Math, Udupi)

Share: ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ   ಮೃಣ್ಮಯ ಮೂರ್ತಿ ಜಲಸ್ತಂಭನಗೊಳಿಸಿದ  ಪರ್ಯಾಯ ಶೀರೂರು ಶ್ರೀಗಳು (Udupi) ಉಡುಪಿ: ಉಡುಪಿ ಶ್ರೀ ಕೃಷ್ಣಮಠದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ಸಂಪನ್ನಗೊಂಡಿತು.   ಈ ಬಾರಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಶ್ರೀ ಕೃಷ್ಣಾಷ್ಠಮಿಯಾಗಿದ್ದು, ವೈಭವಪೂರ್ಣವಾಗಿ ತೆರೆಕಂಡಿತು.    ಶುಕ್ರವಾರ ರಾತ್ರಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಂದ್ರೋದಯ ಕಾಲದಲ್ಲಿ ಶ್ರೀ ಕೃಷ್ಣನಿಗೆ […]

(Udupi) ಉಡುಪಿ: ಉಡುಪಿ ಶ್ರೀ ಕೃಷ್ಣಮಠದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ಸಂಪನ್ನಗೊಂಡಿತು.

  ಈ ಬಾರಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಶ್ರೀ ಕೃಷ್ಣಾಷ್ಠಮಿಯಾಗಿದ್ದು, ವೈಭವಪೂರ್ಣವಾಗಿ ತೆರೆಕಂಡಿತು.

   ಶುಕ್ರವಾರ ರಾತ್ರಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಂದ್ರೋದಯ ಕಾಲದಲ್ಲಿ ಶ್ರೀ ಕೃಷ್ಣನಿಗೆ ಅರ್ಘ್ಯಪ್ರದಾನಿಸಿ, ಮಹಾ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು.

   ಶನಿವಾರ ಕೃಷ್ಣಮಠದ ರಥಬೀದಿಯಲ್ಲಿ ಕೃಷ್ಣನ ಲೀಲಾ ಪ್ರದರ್ಶನ – ಮೊಸರು ಕುಡಿಕೆ ಉತ್ಸವಗಳು ಅತ್ಯಂತ ವೈಭವದಿಂದ ನಡೆದವು.

   ಮಧ್ಯಾಹ್ನ 3.20ಕ್ಕೆ ಪರ್ಯಾಯ ಶ್ರೀಗಳು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಅಲಂಕೃತ ಚಿನ್ನದ ರಥದಲ್ಲಿ  ಆರೋಹಣಗೊಳಿಸಿ, ಮಂಗಳಾರತಿ ಬೆಳಗಿದರು. ನಂತರ ಸಾವಿರಾರು ಭಕ್ತ ಸಮೂಹದ ನಡುವೆ ರಥವನ್ನು ರಥಬೀದಿಯಲ್ಲಿ ಎಳೆಯಲಾಯಿತು. ಮಠದ ಬಿರುದಾವಳಿಗಳು, ಕೊಂಬುಕಹಳೆ, ಮಂಗಳವಾದ್ಯ – ಚಂಡೆಗಳು ರಥೋತ್ಸವದ ಕಳೆ ಹೆಚ್ಚಿಸಿದೆ.

  ರಥಬೀದಿಯ ೧೦ ಕಡೆ ನಿರ್ಮಿಸಲಾಗಿದ್ದ ಗುಜ್ಜಿಗಳ ಮೇಲೆ ಎತ್ತರದಲ್ಲಿ ಕಟ್ಟಲಾಗಿದ್ದ ಕಜ್ಜಾಯ, ಮೊಸರು, ಹಾಲು, ಓಕುಳಿ ನೀರಿದ್ದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಕೊಲುಗಳಿಂದ ಒಡೆದು ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸಿದರು.

  ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಪರ್ಯಾಯ ಶಿರೂರು ಶ್ರೀಗಳು ಕೃಷ್ಣನ ಪ್ರಸಾದ, ವಿವಿಧ ಬಗೆಯ ಉಂಡೆ ಚಕ್ಕಲಿಗಳನ್ನು, ಹಣ್ಣುಗಳ‍ನ್ನು ಭಕ್ತ ಸಮೂಹದತ್ತ ಎಸೆದರು. ಭಕ್ತರು ಪ್ರಸಾದ ಪಡೆಯಲು ಪೈಪೋಟಿ ನಡೆಸುತ್ತಿರುವುದು ಕಂಡು ಬಂದಿದೆ.

  ಈ ರಥೋತ್ಸವದಲ್ಲಿ ಹುಲಿವೇಷ, ಸಹಿತ ನೂರಾರು ವೇಷಧಾರಿಗಳು ತಂಡೋತಂಡವಾಗಿ ರಥಬೀದಿಯನ್ನು ಪ್ರವೇಶಿಸಿ ಭರ್ಜರಿಯಾಗಿ ಕುಣಿದು ಜನರಿಗೆ ಮನೋರಂಜನೆ ನೀಡಿದರು.

 ಈ ಬಾರಿ ವಿಶೇಷವಾಗಿ ರಥಬೀದಿಯಲ್ಲಿ ಕೆಮ್ಮಣ್ಣಿನ ವೇದಿಕೆಯಲ್ಲಿ ಮೈಸೂರಿನಿಂದ ಕರೆಸಲಾದ ಕುಸ್ತಿಪಟುಗಳ ಮಲ್ಲಯುದ್ಧ ವಿಶೇಷ ಆಕರ್ಷಣೆಯಾಗಿತ್ತು.

   ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ,  ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ,  ಮಠದ ದಿವಾಣರಾದ ಡಾ. ಉದಯಕುಮಾರ್ ಸರಳ‍ತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ಮಠದ ಸಿಬ್ಬಂದಿಗಳು  ರಥಬೀದಿಯಲ್ಲಿ ಭಕ್ತರ ನಡುವೆ ಹೆಜ್ಜೆ ಹಾಕಿದರು.

 ರಥವು ರಥಬೀದಿಯಲ್ಲಿರುವ ಎಲ್ಲಾ ಅಷ್ಟಮಠದ ಮುಂದೆ ನಿಂತು ಶ್ರೀ ಮಠಗಳಿಂದ ಪೂಜೆಯನ್ನು ಸ್ವೀಕರಿಸಿ,  ರಥಬೀದಿಯಲ್ಲಿ ಸಾಗಿ ಬಂತು.

  ರಥೋತ್ಸವದ ನಂತರ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು  ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನಗೊಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.