ಎಂಆರ್ ಪಿಎಲ್ ನ 4 ನೇ ಹಂತದ ನಿರ್ವಸಿತರ ಕುಟುಂಬಗಳ ಉದ್ಯೋಗ ಹಾಗೂ ಪುನರ್ವಸತಿ ಬೇಡಿಕೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ
(Mangaluru) ಮಂಗಳೂರು: ಎಂಆರ್ ಪಿಎಲ್ 4ನೇ ಹಂತದ ಭೂ ನಿರ್ವಸಿತರಾಗುವ ಕುತ್ತೆತೂರು ಪೆರ್ಮುದೆ ಎಕ್ಕಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಹಾಗೂ ಉದ್ಯೋಗ ಮತ್ತಿತ್ತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ ಜಿಲ್ಲಾಧಿಕಾರಿ ಮುಲೈಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ದ.ಕ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ವಿಶೇಷ ಭೂಸ್ವಾಧೀನಾಧಿಕಾರಿ, ಎಂಆರ್ಪಿಎಲ್ನ ಅಧಿಕಾರಿಗಳು ಮತ್ತು ಭೂ ನಿರ್ವಸಿತರ ಹಿತ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಶಾಸಕರು ಮತ್ತು ದ.ಕ ಜಿಲ್ಲಾ ಸಂಸದರು ಮಾತನಾಡಿ, ಎಂಆರ್ಪಿಎಲ್ನ ವಿಸ್ತರಣೆಗಾಗಿ ಸ್ಥಳೀಯರು ಭೂಮಿಯನ್ನು ತ್ಯಾಗ ಮಾಡಿದ್ದು, ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ಯಾವುದೇ ನಿಬಂಧನೆಗಳಿಲ್ಲದೆ, ಅಧಿಸೂಚನೆಗೆ ಮೊದಲು ಇದ್ದ ಎಲ್ಲಾ ಮನೆಗಳಿಗೆ ಸೂಕ್ತ ಪುನರ್ವಸತಿ ಮತ್ತು ಉದ್ಯೋಗವನ್ನು ವಿಳಂಬ ಮಾಡದೆ ಶೀಘ್ರವಾಗಿ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಆಗ್ರಹಿಸಲಾಯಿತು.
ಸುಧೀರ್ಘ ನಡೆದ ಸಭೆಯಲ್ಲಿ ಕೊನೆಗೆ ಜಿಲ್ಲಾಧಿಕಾರಿಗಳು ಮತ್ತು ಎಂಆರ್ ಪಿಎಲ್ ನ ಅಧಿಕಾರಿಗಳು ಎಲ್ಲಾ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರು.
ಭೂ ನಿರ್ವಸಿತರ ಹಿತರಕ್ಷಣಾ ಸಮಿತಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಎಂಆರ್ ಪಿಎಲ್ ನ 4 ನೇ ಹಂತದ ಭೂಸ್ವಾಧೀನತೆ ಬಗ್ಗೆ ಇದ್ದ ಉದ್ಯೋಗ ಹಾಗೂ ಪುನರ್ ವಸತಿಯ ಬೇಡಿಕೆಗೆ ಸ್ಪಂದಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ ಕೊಟ್ಯನ್ ಅವರಿಗೆ ಅದೇ ರೀತಿ ದ.ಕ.ಜಿಲ್ಲಾಧಿಕಾರಿ ಹಾಗೂ ಎಂಆರ್ ಪಿಎಲ್ ಅಧಿಕಾರಿಗಳಿಗೆ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

