(Wreckage of Indian Air Force aircraft found after eight years)
ನವದೆಹಲಿ : ಎಂಟು ವರ್ಷಗಳ ಹಿಂದೆ 29
ಸಿಬ್ಬಂದಿಗಳನ್ನು ಹೊತ್ತು ಅಚ್ಚರಿಯ ರೀತಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಟ್ರಾನ್ಸ್‌ಪೋರ್ಟ್ ವಿಮಾನದ ಅವಶೇಷಗಳು ಕೊನೆಗೂ ಪತ್ತೆಯಾಗಿದೆ.
ಜುಲೈ 22, 2016 ರಂದು ಬಂಗಾಳ ಕೊಲ್ಲಿಯಲ್ಲಿ ಭಾರತೀಯ ವಾಯುಪಡೆಯ ಎಎನ್ – 32 ವಿಮಾನ ನಾಪತ್ತೆಯಾಗಿತ್ತು.
ವಿಮಾನ ಚೆನ್ನೈನ ತಾಂಬರಂ ಏರ್‌ಫೋರ್ಸ್ ಸ್ಟೇಷನ್‌ನಿಂದ ಹಾರಾಟ ಆರಂಭಿಸಿತ್ತು. ವಿಮಾನದ ಸಿಬ್ಬಂದಿಯೊಂದಿಗೆ ಒಟ್ಟು 29 ಮಂದಿ ಇದರಲ್ಲಿದ್ದರು. ಅಂಡಮಾನ್ ನಿಕೋಬಾರ್ ಐಸ್ಲಂಡ್‌ನ ಪೋರ್ಟ್‌ಭೇರ್‌ಗೆ ಪ್ರತಿವಾರದಂತೆ ಈ ವಿಮಾನ ಟ್ರಿಪ್ ಆರಂಭಿಸಿತ್ತು. ಬೆಳಗ್ಗೆ 8 ಗಂಟೆಗೆ ಚೆನ್ನೈನಿಂದ ಹಾರಾಟ ಆರಂಭಿಸಿದ್ದ ವಿಮಾನ ಪೋರ್ಟ್ ಭೇರ್‌ನ ಭಾರತೀಯ ನೌಕಾಸೇನೆಯ ಏರ್ ಸ್ಟೇಷನ್ ಐಎನ್‌ಎಸ್ ಉತ್ಕರ್ಷ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು.
ಆದರೆ, ವಿಮಾನ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಗೌಂಡ್ ಸ್ಟೇಷನ್‌ನೊಂದಿಗೆ ತನ್ನೆಲ್ಲಾ ಸಂಪರ್ಕವನ್ನು ಕಳೆದುಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ವಿಮಾನ ಹಾರಾಟದ ವೇಳೆ ರಾಡಾರ್‌ನ ಸಂಪರ್ಕಕ್ಕೂ ಇದು ಸಿಕ್ಕಿರಲಿಲ್ಲ. ಅಂದಿನಿಂದ ಏರ್‌ಫೋರ್ಸ್, ನೌಕಾಸೇನೆ ಹಾಗೂ ಭಾರತೀಯ ಸರ್ಕಾರದ ಸಂಬಂಧಿತ ಇಲಾಖೆ ದೊಡ್ಡ ಪ್ರಮಾಣದ ಶೋಧ ಕಾರ್ಯ ನಡೆಸಿದರೂ ಈ ವಿಮಾನದ ಸಣ್ಣ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ಸಮುದ್ರದಲ್ಲಿ ಕಾಣೆಯಾದ ವಿಮಾನಕ್ಕಾಗಿ ಭಾರತ ಈವರೆಗೂ ನಡೆಸಿರುವ ಅತಿದೊಡ್ಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇದಾಗಿತ್ತು.
ಸಾಕಷ್ಟು ಹುಡುಕಾಟದ ಬಳಿಕ 2016ರ ಸೆಪ್ಟೆಂಬರ್ 15 ರಂದು ಭಾರತೀಯ ವಾಯುಸೇನೆ ತನ್ನ ಶೋಧ ಕಾರ್ಯವನ್ನು ವಿಫಲವಾಗಿದ್ದಾಗಿ ಘೋಷಿಸಿ ಕಾರ್ಯಚರಣೆ ಮುಕ್ತಾಯ ಮಾಡಿತ್ತು. ಅದರೊಂದಿಗೆ ವಿಮಾನದಲ್ಲಿದ್ದ ಎಲ್ಲಾ 29 ಕುಟುಂಬಗಳಿಗೆ ಪತ್ರ ಬರೆದ ಏರ್‌ಫೋರ್ಸ್, ನಾಪತ್ತೆಯಾಗಿರುವ ವಿಮಾನದ ಅವಶೇಷಗಳನ್ನು ಪತ್ತೆ ಮಾಡುವ ಎಲ್ಲಾ ಪ್ರಯತ್ನ ವಿಫಲವಾಗಿದೆ. ಹಾಗಾಗಿ ನಮ್ಮ ಮುಂದೆ ಯಾವುದೇ ಆಯ್ಕೆಗಳು ಇರದ ಕಾರಣ, ವಿಮಾನದಲ್ಲಿದ್ದ ಎಲ್ಲರೂ ಸತ್ತುಹೋಗಿರಬಹುದು ಎಂದು ಘೋಷಣೆ ಮಾಡುತ್ತಿರುವುದಾಗಿ ತಿಳಿಸಿತ್ತು.
ಈ ಬಗ್ಗೆ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ವಿಮಾನವನ್ನು ಪತ್ತೆಹಚ್ಚಲು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಸ್ವಾಯತ್ತ ನೀರೊಳಗಿನ ವಾಹನವನ್ನು (AUV) ಬಳಸಿತು ಎಂದು ತಿಳಿಸಿದೆ.
ಶೋಧ ಚಿತ್ರಗಳ ವಿಶ್ಲೇಷಣೆಯು ಚೆನ್ನೈ ಕರಾವಳಿಯಿಂದ ಸುಮಾರು 140 ನಾಟಿಕಲ್ ಮೈಲಿ (ಸುಮಾರು 310 ಕಿ.ಮೀ) ದೂರದಲ್ಲಿರುವ ಸಮುದ್ರದ ತಳದಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಉಪಸ್ಥಿತಿಯನ್ನು ಸೂಚಿಸಿದೆ. ಶೋಧ ಚಿತ್ರಗಳನ್ನು ಪರಿಶೀಲಿಸಿದಾಗ ಎಎನ್ -32 ವಿಮಾನಕ್ಕೆ ಅನುಗುಣವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ.

