ಕನ್ನಡ ಚಿತ್ರನಟ “ಕುಳ್ಳ” ದ್ವಾರಕೀಶ್ ಇನ್ನಿಲ್ಲ
(Bengaluru) ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಇಂದು ಬೆಳಿಗ್ಗೆ (ಮಂಗಳವಾರ) ನಿಧನರಾದರು.
81 ವರ್ಷ ಪ್ರಾಯದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ದ್ವಾರಕೀಶ್ ಹುಣಸೂರಿನಲ್ಲಿ ಆಗಸ್ಟ್ 19,1942ರಂದು ಜನಿಸಿದ್ದಾರೆ. ದ್ವಾರಕೀಶ್ ಅವರ ತಂದೆ ಶಮಾರಾವ್ ಮತ್ತು ತಾಯಿ ಜಯಮ್ಮ.
ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ದ್ವಾರಕೀಶ್, ಸಿಪಿಸಿ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿದ್ದರು. ಅದಾದ ಬಳಿಕ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಬಿಡಿ ಸಾಮಾನಿನ ಮಳಿಗೆ ಆರಂಭಿಸಿದ್ದರು.
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನಟಿಸಿದ್ದಾರೆ. ಅವರು ಕನ್ನಡದ ಕುಳ್ಳ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ದ್ವಾರಕೀಶ್ ಅವರು 1966ರಲ್ಲಿ ತುಂಗಾ ಬ್ಯಾನರ್ಸ್‌ನಡಿ ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. 1969ರಲ್ಲಿ ಡಾ. ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸೂಪರ್‌ಹಿಟ್ ಸಿನಿಮಾ ಮೇಯರ್ ಮುತ್ತಣ್ಣ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾದರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಅತ್ಯಂತ ಪ್ರಸಿದ್ಧಿ ಪಡೆದಿತ್ತು.
ದ್ವಾರಕೀಶ್ ಅವರು ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿದೆ. ನಂತರ ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ದಿಗ್ದೇಶಕರಲ್ಲಿ ಒಬ್ಬರಾದ ದ್ವಾರಕೀಶ್, ತಮ್ಮ ʻದ್ವಾರಕೀಶ್ ಚಿತ್ರʼ ಬ್ಯಾನರ್ ಅಡಿಯಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ನಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ್ದಲ್ಲದೆ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದರು.
ದ್ವಾರಕೀಶ್‌ರವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

