ಹಿರಿಯ ಪಾಡ್ದನಗಾರ್ತಿ ಕಟಪಾಡಿ ಮೂಡಬೆಟ್ಟು ಗೋಪಿ ಪಾನರ ಅವರಿಗೆ ಕೊಲ್ಲುಶೆಟ್ಟಿ ಪಾಡ್ದನ ಪ್ರಶಸ್ತಿ ಪ್ರದಾನ
(Kaup) ಕಾಪು : ತುಳುವರು ತುಳುನಾಡ ಮಣ್ಣನ್ನು ನಂಬಿ ಬದುಕಿದವರು. ದೈವವನ್ನು ಆಹ್ವಾಹನೆ ಮಾಡಿಕೊಂಡು ನಮ್ಮ ಆಚರಣೆ, ನಂಬಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಪಾಡ್ದನದ ಮೂಲಕ ಮಾಡಿಕೊಂಡವರು.
ಪಾಡ್ದನ ಎಂದರೆ ಜನರಿಂದ ಜನರು ಕಾಪಾಡಿಕೊಂಡು ಬಂದ ಜಾನಪದ ಕಲೆ. ಇದು ಜೀವನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಾಹಿತಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು (Dayamani Shetty Ekkaru) ತಿಳಿಸಿದ್ದಾರೆ.
ಅವರು ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್ ವತಿಯಿಂದ ಕಾಪುವಿನ ಕೆ.ಒನ್ ಹೊಟೇಲಿನಲ್ಲಿ ಸೋಮವಾರ ನಡೆದ ಹಿರಿಯ ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಡಿ ಅಕ್ಕಿ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ (Prakash Suvarna Katapadi) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 800 ವರ್ಷಗಳ ಹಿಂದಿನ ಜನಪದ ತುಳು ಪಾಡ್ದನವನ್ನು ಇಂದಿಗೂ ಜನಜನಿತವಾಗಿ ಇಟ್ಟುಕೊಂಡವರು ದೈವ ನರ್ತಕರು. ಇಂದಿನ ಪೌರಾಣಿಕ, ಜಾನಪದ ನಾಟಕಗಳಿಗೆ, ಸಿನೆಮಾ ಕಥೆಗಳಿಗೂ ತುಳು ಪಾಡ್ದನ ಮೂಲವಾಗಿದೆ.
ತಂತ್ರಜ್ಞಾನ ಮುಂದುವರೆದರೂ ಪಾಡ್ದನಗಳ
ದಾಖಲೀಕರಣವಾಗದಿದ್ದರೆ ಮಂದಿನ ತಲೆಮಾರು ಮರೆತು ಹೋಗಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಾಡ್ದನ ಪ್ರಶಸ್ತಿ ಸಹಿತ 5 ಸಾವಿರ ನಗದಿನೊಂದಿಗೆ ಪತಿ ವಾಮಯ್ಯರ ಜೊತೆಗೂಡಿ ಗೌರವಿಸಲಾಯಿತು.
ಈ ಸಂದರ್ಭ ಗೋಪಿ ಪಾಣಾರ ಅವರು ವರ್ತೆ ಪಂಜುರ್ಲಿ ದೈವದ ಪಾಡ್ದನ ಹಾಡಿದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ದೆಂದೂರು ಸುಭಾಸ್ ಎಮ್. ಸಾಲಿಯನ್ ನೆಲ್ಲಿಕಟ್ಟೆ ಮಾತನಾಡಿ, ತುಳುನಾಡಿನ ಜನಪದ ಸಂಸ್ಕೃತಿ ಅಗಾಧವಾಗಿದ್ದು, ಆಧುನಿಕತೆ ಬೆಳೆದರೂ ತುಳನಾಡಿನ ಭವ್ಯ ನಾಗರಿಕ ಪರಂಪರೆ ನಮಗೆಲ್ಲಾ ದಾರಿದೀಪವಾಗಿದೆ ಎಂದರು. ಪಾಡ್ದನ ಪ್ರಶಸ್ತಿಯ ಪ್ರಾಯೋಜಕರಾದ ಸಮಾಜಸೇವಕ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ ಮಾತನಾಡಿ, ತುಳು ಪಾಡ್ದನಗಳಲ್ಲಿನ ತುಳುನಾಡಿನ ವೀರಪುರುಷರ ಬದುಕಿನ ತಿರುಳನ್ನು ಯುವಜನಾಂಗಕ್ಕೆ ತಿಳಿಯಪಡಿಸುವ ಕೆಲಸ ನಡೆಯಬೇಕಿದೆ ಎಂದರು.
ಉಡುಪಿ ಜೈಂಟ್ ಸಂಸ್ಥೆ ಅಧ್ಯಕ್ಷ ಯಶವಂತ್, ಕೊಲ್ಲು ಕೃಷ್ಣ ಶೆಟ್ಟಿ ಪೌಂಡೇಶನ್ ದೆಂದೂರು ಸಂಸ್ಥೆಯ ಗೌರವಾಧ್ಯಕ್ಷೆ ದೀಪಾ ಚೇತನ್ ಕುಮಾರ್ ಶೆಟ್ಟಿ, ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು,ಕಾರ್ಯದರ್ಶಿ ಗುಣವತಿ ಡಿ.ಶೆಟ್ಟಿ ಮಾತನಾಡಿದರು. ಎಸ್ ಎಂ ಶೆಟ್ಟಿ, ಅಶೋಕ್ ಶೇರಿಗಾರ್ ಅಲೆವೂರ್, ಪುಷ್ಪರಾಜ್ ಸುಲೋಚನ, ದೀಪಕ್ ಬೀರ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಭಾಗ್ಯಲಕ್ಷ್ಮಿ ಉಪ್ಪೂರು ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟಿ ಇಶಾನಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.
ಉಪನ್ಯಾಸಕ ದಯಾನಂದ ಕಿದಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

