ಕರಾವಳಿ ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಲಿದೆ : ಸಿಎಂ ಡಿ.ಕೆ. ಶಿವಕುಮಾರ್
ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ ‘ಉಡುಪಿ ಉಚ್ಚಿಲ ದಸರಾ–2026’ರ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ

ಚಿತ್ರ ಕೃಪೆ : ಸಚಿನ್ ಉಚ್ಚಿಲ
(Uchila) ಉಚ್ಚಿಲ : ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅವರು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಕತ್ವದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುವಾರ ನಡೆದ ‘ಉಡುಪಿ ಉಚ್ಚಿಲ ದಸರಾ–2026’ರ ಮಹಿಳಾ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.
ಅಲೆ ಇಲ್ಲದಿದ್ದರೆ ಸಮುದ್ರಕ್ಕೆ ಬೆಲೆ ಇಲ್ಲ. ಕರಾವಳಿ ಇಲ್ಲದಿದ್ದರೆ ರಾಜ್ಯಕ್ಕೂ ಬೆಲೆ ಇಲ್ಲ. ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ. ಪ್ರವಾಸೋದ್ಯಮ ನೀತಿ ಕುರಿತು ಶೀಘ್ರದಲ್ಲೇ ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಯುವಕರ ವಲಸೆ ತಡೆದು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶ’ಎಂದರು.

ಕಾರ್ಕಳದಲ್ಲಿ ಕೆತ್ತನೆ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪಾರ್ಕ್ ನಿರ್ಮಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕರಾವಳಿಯ ಚಿನ್ನ ಮತ್ತು ಮರದ ಕೆತ್ತನೆ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ:
‘ಮಹಾಲಕ್ಷ್ಮಿ ಎಂದರೆ ಸಂಪತ್ತು, ಮಹಾಸರಸ್ವತಿ ಎಂದರೆ ಜ್ಞಾನ, ಮಹಾಕಾಳಿ ಎಂದರೆ ಶಕ್ತಿ. ಮಹಿಳೆಯರು ಕುಟುಂಬದ ಕಣ್ಣು. ಮಹಿಳಾ ಸಬಲೀಕರಣವೇ ಪ್ರಗತಿಯ ದಾರಿ’ಎಂದರು.

ಮೀನುಗಾರ ಮಹಿಳೆಯರ ಸಮಸ್ಯೆಗಳ ಕುರಿತು ಗಮನಹರಿಸಲಾಗಿದೆ. ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಬಂದರು ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗಲೇ ಯಾವುದೇ ಘೋಷಣೆ ಮಾಡುವುದಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
‘ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇವೆ. ಮಹಿಳೆಯರ ಖಾತೆಗಳಿಗೆ ಹಣ ತಲುಪುತ್ತಿದೆ. ಒಂದೆರಡು ತಿಂಗಳು ವ್ಯತ್ಯಾಸವಾಗಿರಬಹುದು’ ಎಂದರು.
ತುಳು ಭಾಷೆಗೆ ಗೌರವ
ತುಳುವಿನಲ್ಲಿ ಶುಭಾಶಯ ಕೋರುವ ಮೂಲಕ ಭಾಷಣ ಆರಂಭಿಸಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿದ್ದಾಗ ಉಚ್ಚಿಲಕ್ಕೆ ಬಂದು ತಾಯಿಯ ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಜನಸೇವಕನಾಗಿ ಬಂದು ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಹಿಳಾ ದಸರಾವನ್ನು ಉದ್ಘಾಟಿಸಿ, ದೇವಸ್ಥಾನದ ಸಮಿತಿಯಿಂದ ಅಭಿನಂದನೆ ಸ್ವೀಕರಿಸಿದರು. ಉಚ್ಚಿಲ ಹುಲಿವೇಷ “ಪಿಲಿ ಪಂಥ” ೧ ಆಚರಣೆಯ ಪೋಸ್ಟರ್ ಅನಾವರಣಗೊಳಿಸಿದರು.
ಉದ್ಯಮಿ ಹಾಗೂ ಅನ್ನಸಂತರ್ಪಣೆಯ ಉಸ್ತುವಾರಿ ಹರಿಯಪ್ಪ ಕೋಟ್ಯಾನ್ ಮತ್ತು ಸುರೇಶ್ ಕಾಂಚನ್ ರವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಉಡುಪಿ ಉಸ್ತುವಾರಿ ಸಚವ ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಮಂಕಾಳ ಎಸ್. ವೈದ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಮಿಗಳಾದ ಆನಂದ ಸಿ. ಕುಂದರ್, ಪ್ರಸಾದ್ರಾಜ್ ಕಾಂಚನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಬಂಧಕಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.
ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

