ಕರ್ನಾಟಕಉಡುಪಿ ಟಾಯ್ಲೆಟ್ ವಿಡಿಯೋ ರೆಕಾರ್ಡ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ ಬೆಳಕಿಗೆ
ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್
ಹುಬ್ಬಳ್ಳಿ; ಉಡುಪಿಯ ಶೌಚಾಲಯ ಒಂದರಲ್ಲಿ ಇಂದು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಇನ್ನೂ ಸದ್ದು ಮಾಡುತ್ತಿರುವ ಮಧ್ಯೆಯೇ ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿನಿಯರ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಟೋಗಳನ್ನು ಅಪ್ಲೋಡ್ ಮಾಡಿರುವುದಷ್ಟೇ ಅಲ್ಲದೆ, ಪೊಲೀಸರಿಗೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ವೆಬ್‍ಸೈಟ್‍ಗಳಿಂದ ಪಡೆದು ಕೊಳ್ಳಲಾದ ಅಶ್ಲೀಲ ಫೋಟೊಗಳಿಗೆ ಕಾಲೇಜಿನ ವಿದ್ಯಾರ್ಥಿನಿಯರ ಮುಖವಾಡಗಳನ್ನು ಅಂಟಿಸಿ ಎಡಿಟ್ ಮಾಡಿ, ಅಸಭ್ಯ ಭಾಷೆಯಲ್ಲಿ ಕಾಮೆಂಟ್‍ಗಳನ್ನು ಬರೆದು, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿರುವುದು ಕಂಡುಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಾಗೃತರಾದ ಹುಬ್ಬಳ್ಳಿ ನಗರ ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿಯ ಜೊತೆ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.
ಡಿಸಿಪಿ ಗೋಪಾಲ್ ಬ್ಯಾಕೋಡಾ ಖುದ್ದು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಶ್ಲೀಲ ಫೋಟೊಗಳು ಪ್ರಕಟಗೊಂಡಿದ್ದು ಹೇಗೆ, ಅವುಗಳು ಎಲ್ಲಿ ಎಡಿಟ್ ಆಗಿವೆ, ಅಶ್ಲೀಲ ಚಿತ್ರಗಳಿಗೆ ಸ್ಥಳೀಯರ ಮುಖವಾಡಗಳನ್ನು ಅಂಟಿಸಿರುವುದರ ಹಿಂದೆ ಯಾರ ಕೈವಾಡವಿದೆ ಎಂಬ ವಿಚಾರಗಳ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಹಾಕುತ್ತಿರುವ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದರು. ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯರಿಗೆ ಅನುಮಾನ ಇದ್ದವರನ್ನು ಠಾಣೆಗೆ ಕರೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಹೇಳಿದರು.
ಎಷ್ಟು ಜನರನ್ನು ವಿಚಾರಣೆ ಮಾಡುತ್ತಾ ಇದ್ದೀವಿ ಅಂತಾ ಹೇಳೋಕೆ ಬರಲ್ಲ. ಕಾರಣ ಯುವತಿಯರಿಗೂ ಗೊತ್ತಿಲ್ಲ. ನಾವು ಕೂಡ ಹೇಳಲಿಕ್ಕೆ ಬರೋದಿಲ್ಲ. ಅಲ್ಲಿನ ವಿದ್ಯಾರ್ಥಿಗಳಇಂದಲೇ ಕೃತ್ಯ ನಡೆದಿರಬಹುದು.
15 ದಿನದ ಮುಂಚೆ ಯಾರು ಹೇಳಿಲ್ಲ. ಬಳಿಕ ಸಂತಸ್ತ ಯುವತಿ ಈ ಬಗ್ಗೆ ತಿಳಿಸಿದ್ದಾಳೆ ಎಂದರು.
ಮೂರು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಕಾಲೇಜ್‌ನವರು ಮಾಹಿತಿ ಕೊಡಬೇಕಿತ್ತು ಕೊಟ್ಟಿಲ್ಲ. ಈಗ ವಿಚಾರ ಮಾಡುತ್ತಿದ್ದೇವೆ. ಅವರ ಹೆಸರು ಹೇಳೋಕೆ ಬರಲ್ಲ. ಕೆಲವು ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಕಾಲೇಜ್‌ನಲ್ಲಿ ಯುವತಿಯರು ಮಾತಾನಾಡುವ ವಿಷಯ ಆರೋಪಿಗೆ ಎಲ್ಲಾ ಗೊತ್ತಾಗುತ್ತಿತ್ತಂತೆ. ಹೀಗಾಗಿ ಈ ನೀಚ ಕೆಲಸ ಮಾಡಿದ್ದು ವಿದ್ಯಾರ್ಥಿ ಅನ್ನೋ ಅನುಮಾನ ವ್ಯಕ್ತವಾಗಿದೆ. ಆರೋಪಿಯನ್ನು ನಾವು ಪತ್ತೆ ಹಚ್ಚುತ್ತೇವೆ ಎಂದರು.
ನಮ್ಮ ಕೆಲಸ ತನಿಖೆ ಮಾಡಿ, ನಂತರ ಆರೋಪಿಯನ್ನು ಬಂಧಿಸುವುದಾಗಿದೆ. ಇದು ಆನ್ಲೈನ್ ಕಾಲವಾಗಿದ್ದು, ಯಾರು ಬೇಕಾದರೂ ಮನೇಲಿ ಕುಳಿತು ಈ ರೀತಿ ಮಾಡಿರಬಹುದು. ವಿದ್ಯಾರ್ಥಿಗಳ ಫೋಟೋ ಕೂಡ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದಲೇ ತಗೊಂಡಿದ್ದಾರೆ. ಒಂದು ಫೋಟೋ ಸಿಕ್ಕರೂ ಅದನ್ನು ಬೇರೆ ದೇಹಕ್ಕೆ ಅಳವಡಿಸಬಹುದು. ಈ ರೀತಿ ಮಾಡುವಂತ ಮಕ್ಕಳಿಗೆ ಪಾಲಕರು ಬುದ್ಧಿ ಹೇಳಬೇಕು. ಹಾಗೆಯೇ ಯುವತಿಯರು ಜಾಗೃತರಾಗಿರಬೇಕು ಎಂದು ಪೊಲೀಸ್ ಕಮಿಷನರ್ ಹೇಳಿದರು.

