ಕಲೆ, ಸಂಸ್ಕೃತಿ ಜನರನ್ನು ಬೆಸೆಯುವ ಸೇತುವೆ: ಶ್ರೀ ರಮಾನಂದ ಗುರೂಜಿ
ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಂಪಾಜೆ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿದ ಗುರೂಜಿ
(Udupi) ಉಡುಪಿ: ನಮ್ಮ ಬದುಕಿನಲ್ಲಿ ಸಂಸ್ಕೃತಿ ಮತ್ತು ಕಲೆಗೆ ವಿಶೇಷ ಸ್ಥಾನವಿದ್ದು, ಇಂತಹ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸುವ ಸೇತುವೆಯಾಗಿ ಸಂಪಾಜೆ ರಂಗ ಸಂಗಮ ಕಾರ್ಯನಿರ್ವಹಿಸುತ್ತಿದೆ. ತಲೆಮಾರುಗಳಿಂದ ಬಂದಿರುವ ಕಲೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹೇಳಿದರು.
ಸಂಪಾಜೆ ರಂಗ ಸಂಗಮ ಬೆಂಗಳೂರು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರವಿವಾರ ನಡೆದ ಸಂಪಾಜೆ ಸಾಂಸ್ಕೃತಿಕ ಸಂಭ್ರಮ-ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನೆಲೆಸಿರುವ ಸಂಪಾಜೆಯವರು ಸುತ್ತಮುತ್ತಲಿನ ಕಲಾಭಿಮಾನಿಗಳನ್ನು ಒಂದೆಡೆ ಸೇರಿಸಿ ತಮ್ಮೂರಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ. ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ನಗರ ಜೀವನ ನಡೆಸುತ್ತಿರುವವರನ್ನು ತಾಯ್ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆಯುವಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಗಾಯಕ ಶಶಿಧರ ಕೋಟೆ ಮಾತನಾಡಿ, ಇದ್ದಷ್ಟು ಕಾಲ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದದಿಂದ ಬದುಕುವುದು ನಮ್ಮ ಧರ್ಮ. ಜೀವನ ನಶ್ವರವಾಗಿದ್ದು, ಮನಸ್ಸು ಹಗುರವಾಗಬೇಕಾದರೆ ಸಂಗೀತವನ್ನು ಆಲಿಸುವುದು ಹಾಗೂ ಹಾಡುವುದನ್ನು ಮರೆಯಬಾರದು. ಸಂಪಾಜೆ ರಂಗ ಸಂಗಮ ಸಂಸ್ಥೆಯು ಎಲ್ಲರನ್ನೂ ಒಗ್ಗೂಡಿಸಿ ಸುಂದರವಾದ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸುರ್ವೆ ಪ್ರತಿಷ್ಠಾನದ ರಮೇಶ್ ಸುರ್ವೆ ಶುಭಾಶಂಸನೆಗೈದರು.
ಜಿಲ್ಲಾ ದೈವಾರಾಧಕರ ಒಕ್ಕೂಟದ ವಿನುತ್ ಶೆಟ್ಟಿ, ಮಹಿಳಾ ಉದ್ಯಮಿ ವಿದ್ಯಾಲತಾ ಶೆಟ್ಟಿ ಬನ್ನಂಜೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧನಾ ಶಿಖರಕ್ಕೇರಿದ ಶ್ರೀ ರಮಾನಂದ ಗುರೂಜಿ ಅವರನ್ನು ಸಂಸ್ಥೆಯ ವತಿಯಿಂದ ‘ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನಿಸಿ ಮಾಡಿ ಸಮ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಸುಧಾಕರ ಶೆಟ್ಟಿ ತಂಗಾಣ, ನಿಟ್ಟೂರು ಮಹಾಬಲ ಶೆಟ್ಟಿ, ನಿತಿನ್ ಶೇರಿಗಾರ್ ಅಲೆವೂರು, ನವೀನ್ ಪಾತ್ರಿ ಕುಂಜಿಬೆಟ್ಟು, ಸುಬ್ರಾಯ ಪಾತ್ರಿ, ಕೃಷ್ಣ ಪೂಜಾರಿ ಅಂಜಾರು ಅವರನ್ನು “ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ’, ಶ್ವೇತಾ ಪುಣೆ, ರಮಣಿ ಎಂ., ಪುಷ್ಪಾ ಶೆಟ್ಟಿ, ಸುಷ್ಮಾ ಎಸ್. ಬಂಟ್ವಾಳ, ರಾಧಿಕಾ ಪ್ರಭು, ಅನುಪಮಾ ಜೆ. ಕುಮಾರ್, ಆಶಾ ಚಂದ್ರಶೇಖರ ಅವರನ್ನು “ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ನೃತ್ಯ ಕಲಾ ತಂಡದ ಶ್ರುತಿ ಮತ್ತು ತಂಡದವರು, ಕಾಲಗೆಜ್ಜೆ ನೃತ್ಯಾಲಯದ ಗಾನವಿ ಮತ್ತು ತಂಡದವರು, ಕಲ್ಯಾಣಿ ಡ್ಯಾನ್ಸ್ ಅಕಾಡೆಮಿಯ ತೃಪ್ತಿ ಶೆಟ್ಟಿ ಮತ್ತು ತಂಡದವರು, ರುಚಿತಾ ಎಸ್.ಕೆ. ಅವರನ್ನು ರಂಗ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.
ಶಶಿಧರ ಕೋಟೆ, ರಮೇಶ್ ಸುರ್ವೆ, ರಾಜ್ ಸಂಪಾಜೆ, ಐಎಸ್‌ಆರ್‌ಎನ್ ಎಚ್‌ಆರ್ ವಿಭಾಗದ ಅಧಿಕಾರಿ ಲೋಹಿತ್ ಎನ್., ಭವಿಷ್, ಶಮಿತ್ ಶೆಟ್ಟಿ, ಹರಿಪ್ರಸಾದ್, ಗಿರೀಶ್ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಸಂಸ್ಥಾಪಕ ರಾಜ್ ಸಂಪಾಜೆ ಸ್ವಾಗತಿಸಿದರು. ಶ್ರೀನಿವಾಸ ಕೆಮ್ತೂರು ನಿರೂಪಿಸಿ, ವಂದಿಸಿದರು.
ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ನೃತ್ಯ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

