ಕಾಪುವಿನ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಭಿನಂದನೀಯ : ಕೆ.ಎಲ್. ಕುಂಡಂತಾಯ
ಕಾಪುವಿನಲ್ಲಿ 8 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
(Kaup) ಕಾಪು : ಜಾನಪದದ ಜೊತೆಗೆ ಐತಿಹಾಸಿಕ ಮಾನ್ಯತೆಯ ಕುರುಹುಗಳು ಇರುವ ಕಾಪುವಿನಂತಹ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದು ಜಾನಪದ ವಿದ್ವಾಂಸ ಹಿಂದಿನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಎಲ್. ಕುಂಡಂತಾಯ ಹೇಳಿದರು.
ಅವರು ಶನಿವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 8 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪುವಿನ ದೀಪಸ್ತಂಭ, ಕೆಳದಿ ಅರಸರ ಇತಿಹಾಸಕ್ಕೆ ಸಂಬಂಧಿಸಿದ ಮನೋಹರ ಗಢ, ಬೆಳ್ಮಣ್‌ನ ತಾಮ್ರಶಾಸನ, ಕಾಪುವಿನ ಮರ್ದ ಹೆಗ್ಗಡೆ ಹಾಗೂ ಎಲ್ಲೂರಿನ ಕುಂದ ಹೆಗ್ಗಡೆ ನಡುವೆ ನಡೆದ ಒಪ್ಪಂದದ ಶಾಸನವು ಕಾಪುವಿನ ಇತಿಹಾಸದ ಪ್ರಮುಖ ದಾಖಲೆಯಾಗಿದೆ ಎಂದರು.
ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವೈ,ಎನ್ .ಶೆಟ್ಟಿ ಮಾತನಾಡಿ, ಕನ್ನಡ ಮತ್ತು ತುಳು ಭಾಷೆಗಳು ಅಕ್ಕ-ತಂಗಿಯರ ಬಾಂಧವ್ಯದಂತೆ ಪರಸ್ಪರ ಬೆಸೆದುಕೊಂಡು ಬದುಕುತ್ತಿವೆ. ತುಳು ಜಾನಪದ ಸಾಹಿತ್ಯ, ಭೂತಾರಾಧನೆ, ಪಾಡ್ದನಗಳು ಹಾಗೂ ಕರಾವಳಿಯ ಜನಪದ ಪರಂಪರೆ ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಅಮೂಲ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಅಗತ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಾಹಿತಿ ಡಾ. ಬಿ. ಜನಾರ್ದನ ಭಟ್ ಹಾಗೂ ದಂಡತೀರ್ಥ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಶುಭಾಶಂಸನೆಗೈದರು.
ಕಾಪು ಪುರಸಭೆಯ ಅಧ್ಯಕ್ಷೆ ಮೋಹಿನಿ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನೆರವೇರಿಸಿದರು.
ಸಮ್ಮೇಳನದ ಪೂರ್ವಾಧ್ಯಕ್ಷ ಬಾಬು ಕೊರಗ, ಜಿಲ್ಲಾ ಸಾಹಿತ್ಯ ಪರಿಷತ್ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು.
ಕನ್ನಡ ಸಾರಸ್ವತ ಲೋಕಕ್ಕೆ ಧರ್ಮಾನಂದ ಶಿರ್ವ ಅವರ ‘ಚಿಪ್ಪೊಡೆಯದ ಮುತ್ತು’ ಹಾಗೂ ಶ್ರೀನಿವಾಸ ಪ್ರಭು ಅವರ ‘ಅಂತರಂಗದ ಕಣ್ಣು ತೆರೆದಾಗ’ ಕವನ ಸಂಕಲನವನ್ನು ಕನ್ನಡ ಸಾಹಿತು ಪರಿಷತ್ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಜೂರು ಸ್ವಾಗತಿಸಿದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಪ್ರಸ್ತಾವನೆಗೈದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯದ ನುಡಿಗಳನ್ನಾಡಿದರು. ಸುಧಾಕರ ಶೆಣೈ ಸಾಂತೂರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಧರ್ ಪುರಾಣಿಕ್ ವಂದಿಸಿದರು.

