ಕಾಪು ಪತ್ರಿಕಾ ಭವನದಲ್ಲಿ ಈದ್ ಸೌಹಾರ್ದ ಕೂಟ
ಮುಸ್ಲಿಂ ಒಕ್ಕೂಟದ ಸದಸ್ಯ ಇದ್ರಿಸ್ ಹೂಡೆಯವರಿಂದ ಈದ್ ಆಚರಣೆ, ಉಪವಾಸದ ಬಗ್ಗೆ ಮಾಹಿತಿ
(Kaup) ಕಾಪು: ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಕಾಪು ಪತ್ರಿಕಾ ಭವನದಲ್ಲಿ ಈದ್ ಸೌಹಾರ್ದ ಕೂಟ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಇದ್ರಿಸ್ ಹೂಡೆ ಮಾತನಾಡಿ, ನಿರಾಕಾರನಾದ ಅಲ್ಲಾಹುವಿನ ಮೇಲಿನ ನಂಬಿಕೆಯನ್ನು ಅನಾವರಣಗೊಳಿಸುವುದೇ ರಂಜಾನ್ ಮಾಸದ ಮುಖ್ಯ ಉದ್ದೇಶವಾಗಿದೆ. ರಂಜಾನ್ ಮಾಸದಲ್ಲಿನಡೆಸುವ ಇಫ್ತಾರ್ ಕೂಟಗಳು ಸೌಹಾರ್ದತೆಯ ಪ್ರತೀಕವಾಗಿದ್ದು ಪತ್ರಕರ್ತರ ಸಂಘದವರು ಈದ್ ಸಂಭ್ರಮವನ್ನು ಆಚರಿಸುವ ಮೂಲಕ ಸಾಮಾಜಿಕ ಜವಾಬ್ದಾರಿಗಳನ್ನು ಹೆಚ್ಚಿಸಿದ್ದಾರೆ ಎಂದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಅಬ್ದುಲ್ ಹಮೀದ್ ಕಣ್ಣಂಗಾರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಶುಭಾಶಂಸನೆಗೈದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಹರೀಶ್ ಹೆಜ್ಮಾಡಿ, ಕಟ್ಟಡ ಸಮಿತಿ ಅಧ್ಯಕ್ಷ ರಾಕೇಶ್ ಕುಂಜೂರು, ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ, ಕೋಶಾಧಿಕಾರಿ ಸಂತೋಷ್ ಕಾಪು ಉಪಸ್ಥಿತರಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಾಮಚಂದ್ರ ಅಚಾರ್ಯ ಪ್ರಸ್ತಾವನೆಗೈದರು. ಜಿಲ್ಲಾ ಸಮಿತಿ ಸದಸ್ಯ ವಿಜಯ ಆಚಾರ್ಯ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಾಪು ವಂದಿಸಿದರು.

