ಕಾಪು: ಮೋರಿಯಲ್ಲಿ ನೀರಿನ ಪೈಪ್, ಮಳೆ ನೀರಿಗೆ ತಡೆ
(Kaup) ಕಾಪು : ಕಾಪು ಪುರಸಭೆಯ ಆಡಳಿತಕ್ಕೆ ಒಳಪಟ್ಟ ಬಡಗರಗುತ್ತು ವಾರ್ಡಿನ ಕೊಂಬಗುಡ್ಡೆಯ ಜಿ. ಅರ್ ಸ್ಟೋರ್ ಎದುರು, ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ಹಾಕಿದ ಮೋರಿಯೊಳಗೆ ಕುಡಿಯುವ ನೀರಿನ ಎರಡೆರಡು ಪೈಪ್ ಹಾಕಿದ ಕಾರಣ, ಮಳೆ ನೀರು ಸರಾಗವಾಗಿ ಹರಿದುಹೋಗದೆ, ರಸ್ತೆಯ ಮೇಲೆ ಹರಿದು, ದ್ವಿಚಕ್ರ ವಾಹನ ಮತ್ತು ಪಾದಾಚಾರಿಗಳಿಗೆ ಹೋಗಲು ಅನಾನುಕೂಲವಾಗುತ್ತಿದೆ.
ಈ ಸಮಸ್ಯೆಯನ್ನು ವಾರ್ಡ್ ಸದಸ್ಯೆಯ ಮೂಲಕ ಅಧಿಕಾರಿಗಳಿಗೆ ತಿಳಿಸಿದರೂ, ಇಷ್ಟರ ತನಕ ಯಾವುದೇ ಪರಿಹಾರ ಒದಗಿಸಿಲ್ಲ.
ಕಳೆದ ವರ್ಷ ಸ್ಥಳೀಯರೊಬ್ಬರು ಪತ್ರ ಮೂಲಕ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಯವರು ಪುರಸಭೆಯ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವ ಆದೇಶ ನೀಡಿದ್ದರು. ಆದರೆ ಅವರ ಆದೇಶಕ್ಕೆ ಕಾಪು ಪುರಸಭೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ.
ದಾರಿಯ ಎರಡೂ ಬದಿಯಲ್ಲಿ ಹೊಂಡ ತೋಡಿ ಇಟ್ಟಿದ್ದು, ಜೋರಾಗಿ ಮಳೆ ಬಂದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ, ಮಳೆ ನೀರು ರಸ್ತೆಯ ಮೇಲಿನಿಂದ ಹರಿದು ಹೋಗದೆ, ಮೋರಿಯಲ್ಲಿ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

