ಕಾಪು ಶ್ರೀ ಹೊಸ ಮಾರಿಗುಡಿ: ಶರನ್ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಸೆ. 22 ರಿಂದ ಅ. 2ರ ವರೆಗೆ 11 ದಿನಗಳ ಕಾಲ ಶರನ್ನವರಾತ್ರಿ ಆಚರಣೆ
(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಸೆಪ್ಟೆಂಬರ್ 22 ರಿಂದ ಮೊದಲ್ಗೊಂಡು ಅಕ್ಟೋಬರ್ 2ರ ವರೆಗೆ 11 ದಿನಗಳ ಪರ್ಯಂತ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವ ಮತ್ತು ವಿಜಯ ದಶಮಿಯವರೆಗೆ ಪ್ರತಿನಿತ್ಯ ನಡೆಯುವ ವಿಶೇಷ ಪೂಜೆಯ ವಿವರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಕಾಲಾವಧಿ ಹೂವಿನ ಪೂಜೆಯ ಸಂದರ್ಭ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸುವ ಮೂಲಕ ಬಿಡುಗಡೆ ಮಾಡಲಾಯಿತು.
ಈ ಬಾರಿಯ ನವರಾತ್ರಿ ಬಹಳ ವಿಶೇಷವಾಗಿದ್ದು, ನೂತನ ಗುಡಿಯಲ್ಲಿ ನೆಲೆಸಿರುವ ಅಮ್ಮನಿಗೆ ಪ್ರಥಮ ನವರಾತ್ರಿಯಾಗಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನ ಅನುಗ್ರಹವನ್ನು ಪಡೆದುಕೊಳ್ಳಬೇಕೆಂದು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಆಶಯವಾಗಿದೆ.
ಈಗಾಗಲೇ ನವರಾತ್ರಿಯ ಬಗ್ಗೆ ಸಭೆಯನ್ನು ನಡೆಸಲಾಗಿದ್ದು, ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡುವುದು ಸಮಿತಿಯ ಜವಾಬ್ದಾರಿಯಾಗಿದೆ.
ನವರಾತ್ರಿಯಲ್ಲಿ ದುರ್ಗಾ ನಮಸ್ಕಾರ, ಕಲ್ಪೋಕ್ತ ಪೂಜೆ ಹಾಗೂ ಇನ್ನಿತರ ಸೇವೆಯ ಅವಕಾಶವನ್ನು ಒದಗಿಸಲಾಗಿದೆ.
ಸೆಪ್ಟೆಂಬರ್ 30ರ ಮಂಗಳವಾರ ಮಹಾ ಚಂಡಿಕಾಯಾಗ, ಕೆಂಡಸೇವೆ, ಮಹಾ ಅನ್ನಪ್ರಸಾದ ನಡೆಯಲಿದೆ.
ಚಂಡಿಕಾಯಾಗದ ಸಂಕಲ್ಪಕ್ಕೆ ರೂಪಾಯಿ 5000/- ಪಾವತಿಸಿದ ಭಕ್ತರಿಗೆ ಚಂಡಿಕಾಯಾಗದ ವಿಶೇಷ ಪ್ರಸಾದವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸಂಕಲ್ಪದಲ್ಲಿ ಭಾಗಿಯಾಗುವವರು ಕೂಡಲೇ ದೇವಳದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಎಂದು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಕಲ್ಯ ವೇದಮೂರ್ತಿ ಶ್ರೀನಿವಾಸ ತಂತ್ರಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಸ್ಥಳೀಯರಾದ ರಮೇಶ್ ಹೆಗ್ಡೆ ಕಲ್ಯ, ಯೋಗೀಶ್ ವಿ. ಶೆಟ್ಟಿ, ಸುಧಾಕರ ಶೆಟ್ಟಿ ಮಕರ, ಶಿಲ್ಪಾ ಜಿ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

