ಕಾರ್ಕಳ: “ಆಷಾಢದಲ್ಲಿ ಗಮಕ ಸಂಭ್ರಮ” ಕಾರ್ಯಕ್ರಮ
(Karkala) ಕಾರ್ಕಳ: ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕು ಘಟಕ ಇವರ ಆಶ್ರಯದಲ್ಲಿ “ಆಷಾಢದಲ್ಲಿ ಗಮಕ ಸಂಭ್ರಮ” ಎಂಬ ವಿಶಿಷ್ಟ ಕಾರ್ಯಕ್ರಮವು ಕಾರ್ಕಳದ ಸಂಭ್ರಮ ಸಭಾಭವನದಲ್ಲಿ ಸಂಪನ್ನಗೊಂಡಿತು.
ಕುಮಾರವ್ಯಾಸ ಭಾರತದ ಆದಿಪರ್ವದಲ್ಲಿ ಬರುವ “ಹಿಡಿಂಬಾಸುರ ಪ್ರಕರಣ” ಎಂಬ ಕಾವ್ಯಭಾಗದ ವಾಚನವನ್ನು ಸಂಗೀತ ವಿದುಷಿ ಶ್ರೀಮತಿ ಉಮಾ ಮಂಜುನಾಥ, ಯುಎಸ್ ಎ ರವರು ಮತ್ತು ವ್ಯಾಖ್ಯಾನವನ್ನು ಪಡುಬಿದ್ರಿಯ ಡಾ. ರಾಘವೇಂದ್ರ ರಾವ್ ನಡೆಸಿಕೊಟ್ಟರು.
ಹೊಸ ಪೀಳಿಗೆಯ ಜನರಿಗೆ ಕನ್ನಡ ಕಾವ್ಯಗಳ ಸೊಬಗನ್ನು, ಗಮಕ ಕಲೆಯ ಮಹತ್ತ್ವವನ್ನು ಪರಿಚಯಿಸುವ ಪ್ರಯತ್ನವಾಗಿ “ಆಷಾಢದಲ್ಲಿ ಗಮಕ ಸಂಭ್ರಮ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಕಾರ್ಕಳ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಎಚ್. ಗಣಪಯ್ಯನವರು ಹೇಳಿದರು.
ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಮಾಧವ ಭಟ್ ರವರು ಸ್ವಾಗತಿಸಿದರು. ಉಡುಪಿ ಜಿಲ್ಲಾ ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ ಕುಮಾರ ಕೆಮ್ಮಣ್ಣು ಇವರು ಗಮಕ ಕಲಾವಿದರನ್ನು ಪರಿಚಯಿಸಿ, ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.
ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆ ಮತ್ತು ಹಿರಿಯ ಗಮಕ ವಿದುಷಿ ಶ್ರೀಮತಿ ಯಾಮಿನಿ ಭಟ್‌ರವರು ಗಮಕಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರನ್ನು ಸಮ್ಮಾನಿಸಿ , ಗೌರವಿಸಿದರು.
ಗಮಕ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗಮಕ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.

