ಕಾರ್ಕಳ : ಪರಶುರಾಮನ ಪ್ರತಿಮೆ ವಿವಾದ- ರಾಜದ್ರೋಹ ಎಸಗಿದ ಶಾಸಕ ಸುನೀಲ್ ಕುಮಾರ್ ರಾಜೀನಾಮೆಗೆ ಆಗ್ರಹ
(Karkala) ಕಾರ್ಕಳ: ಕಾರ್ಕಳದ ಬೈಲೂರು ಉಮ್ಮಿಕ್ಕಲ್ ಬೆಟ್ಟದ ಮೇಲಿನ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತಾಗಿ ಕಾರ್ಕಳ ಪೋಲಿಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಮಾನ್ಯ ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ರಾಜದ್ರೋಹ ಎಸಗಿದ ಶಾಸಕ ಸುನೀಲ್ ಕುಮಾರ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿದರು.
1)ಬೈಲೂರಿನ ಉಮ್ಮಿಕ್ಕಲ್ ಬೆಟ್ಟದ ಮೇಲೆ ನಿರ್ಮಾಣವಾದ ಪರಶುರಾಮ ಪ್ರತಿಮೆಯ ಬಗ್ಗೆ ಶಿಲ್ಪಿ ಕೃಷ್ಣ ನಾಯಕ್ ರೂ 1,83.00,000 ಪಡೆದು ಪ್ರತಿಮೆಯನ್ನು ಕಂಚಿನ ಲೋಹದಿಂದ ನಿರ್ಮಾಣ ಮಾಡದೆ ಹಿತ್ತಾಳೆ ಲೋಹದಿಂದ ಮಾಡಿರುತ್ತಾರೆ ಎಂದು ತಜ್ಞರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿರುತ್ತದೆ.
2)ಪ್ರತಿಮೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಸಚಿನ್ ವೈ ಕುಮಾರ್ ಇವರು ವರ್ಕ್ ಆರ್ಡರ್ ನಲ್ಲಿರುವ ಷರತ್ತುಗಳನ್ನು ಪಾಲಿಸಿರುವುದಿಲ್ಲ ಹಾಗೂ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಹೇಳಿ ಅದನ್ನು ದಿನಾಂಕ 12:10:2023 ರಿಂದ 25:02:2024 ವರೆಗೆ ಉಡುಪಿಯ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿನ ನಿರ್ಮಿತಿ ಕೇಂದ್ರದ ಶೆಡ್ಡಿನಲ್ಲಿ ಅಡಗಿಸಿಟ್ಟು ತಪ್ಪು ಮಾಹಿತಿ ನೀಡಿರುತ್ತಾರೆ.
3) ಅರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಅರುಣ್ ಕುಮಾರ್, ಹಾಗೂ ಇಂಜಿನಿಯರ್ ಸಚ್ಚಿನ್ ವೈ ಇವರುಗಳು ಅಪರಾಧಿ ಒಳಸಂಚು, ನಂಬಿಕೆ ದ್ರೋಹ, ಮತ್ತು ವಂಚನೆ ಎಸಗಿ ಸಾಕ್ಷಿ ನಾಶ ಮಾಡಿರುತ್ತಾರೆ ಅವರ ವಿರುದ್ದ ಕಲಂ 420, 409, 201, 120(ಬಿ)ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಈ ಎಲ್ಲಾ ಪ್ರಮುಖ ಅಂಶಗಳನ್ನು ಗಮನಿಸಿದಾಗ ಈ ಸಂಪೂರ್ಣ ಪ್ರಕರಣವು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 2023 ರ ವಿಧಾನಾಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ನಡೆದ ಒಂದು ವ್ಯವಸ್ಥಿತವಾದ ಪೂರ್ವಯೋಜಿತವಾದ ವಂಚನೆ, ಪರಶುರಾಮ ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇನೆಂದು ಕಳೆದ ಎರಡು ವರ್ಷಗಳಿಂದ ನಿರಂತರ ಸುಳ್ಳು ಹೇಳಿ ಜನತೆಗೆ ಎಸಗಿದ ಧಾರ್ಮಿಕ ನಂಬಿಕೆ ದ್ರೋಹ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ಬೊಮ್ಮಯಿಯವರನ್ನು ಮತ್ತು ತನ್ನ ಸಚಿವ ಸಂಪುಟದ ಸಚಿವರನ್ನು ಕರೆಸಿ ಅವರಿಂದ ನಕಲಿ ಪ್ರತಿಮೆಯನ್ನು ಉದ್ಘಾಟಿಸಿ ತನ್ನದೇ ಸರಕಾರಕ್ಕೆ ದ್ರೋಹ ಎಸಗಿದ ರಾಜದ್ರೋಹ ಪ್ರಕರಣವೂ ಆಗಿದೆ ಆದ್ದರಿಂದ ಶಾಸಕರು ನೈತಿಕ ಹೊಣೆಹೊತ್ತು ರಾಜೀನಾಮೆಯನ್ನು ನೀಡಬೇಕು ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ.
ಅವರ ವಾದವೇನು?
ಕಾಂಗ್ರೆಸಿಗರು ಪೈಬರ್ ಪ್ರತಿಮೆ ಎಂದು ನಮ್ಮ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ಆರೋಪ ನಿರಾಧಾರ, ನಾವು ಇದರಲ್ಲಿ ಗೆದ್ದಿದ್ದೇವೆ ಎನ್ನುವ ಮೂರ್ಖತನದ ಮಾತುಗಳನ್ನು ಅವರು ಈಗ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ ಇಲ್ಲಿ ಮುಖ್ಯವಾದ ಆರೋಪ ಮತ್ತು ದೂರು ದಾಖಲಾಗಿರುವುದು ಪ್ರತಿಮೆಯನ್ನು ಕಂಚಿನಿಂದ ಮಾಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆಯಲ್ಲವೇ?
ಮಾಡಿದ ಆರೋಪಕ್ಕೆ ನಾವು ಬದ್ದ. ನೀವು ಸವಾಲನ್ನು ಸ್ವೀಕರಿಸುವರೇ? ಉಮಿಕಲ್ ಬೆಟ್ಟದ ಮೇಲೆ ನಾವು ಭೇಟಿ ನೀಡಿದಾಗ ಪ್ರತಿಮೆಯ ಸೊಂಟದ ಕೆಳಗಿನ ಭಾಗದ ಸುತ್ತಲೂ ಗ್ಲಾಸ್ ಪೈಬರ್ ಲೇಪಿತ ಅಂಶಗಳು ಕಂಡುಬಂದಿತ್ತು ಮತ್ತು ಸುತ್ತಲೂ ಅದರ ತುಂಡುಗಳು ಬಿದ್ದುಕೊಂಡಿದ್ದವು. ಆ ಕಾರಣಕ್ಕಾಗಿ ನಾವು ಈ ಪ್ರತಿಮೆಯನ್ನು ಪೈಬರನ್ನೂ ಬಳಸಿ ಮಾಡಿರಬಹುದು ಎಂದು ಆರೋಪವನ್ನು ಮಾಡಿದೆವು. ನಾವು ಅಂದು ಮಾಡಿದ ಆರೋಪಕ್ಕೆ ಈಗಲೂ ಬದ್ದರಾಗಿದ್ದೇವೆ. ಬೆಟ್ಟದ ಮೇಲೆ ಅರ್ಧ ಭಾಗ ಪೈಬರ್ ನಿಂದಲೇ ಲೇಪಿತವಾಗಿದೆ ಅದನ್ನು ಯಾರು ಬೇಕಿದ್ದರೂ ಹೋಗಿ ಪರೀಕ್ಷೆ ಮಾಡಬಹುದು. ಆದರೆ ಪ್ರತಿಮೆಯಲ್ಲಿ ಕಂಚನ್ನು ತೋರಿಸಲು ನಿಮ್ಮಿಂದ ಸಾದ್ಯವೇ ಎನ್ನುವ ಸವಾಲು ಹಾಕುತ್ತೇವೆ. ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿಲ್ಲ ಎನ್ನುವ ನಮ್ಮ ಆರೋಪ ಇಂದು ಸತ್ಯವಾಗಿದೆ ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಎರಡೆರಡು ಪ್ರತಿಮೆಯ ಉದ್ದೇಶ ಏನು? ಪ್ರತಿಮೆಯ ಶಿಲ್ಪಿಯ ಬೆಂಗಳೂರಿನ ಗೋಡಾಮಿನಿಂದ ಪೋಲಿಸರು ವಶಕ್ಕೆ ಪಡೆದ ಪ್ರತಿಮೆಯ ಭಾಗ ಹಿತ್ತಾಳೆ ಆಗಿದೆಯೆಂದು FSIL ತನಿಖೆಯಿಂದ ಸಾಭೀತಾಗಿದೆ. ಅದರಲ್ಲಿ ಪ್ರತಿಮೆಯ ಮುಖ, ಎದೆ, ಎರಡು ಕಾಲುಗಳು ಮತ್ತು ಪಾದ ಭಾಗಗಳು ಬೇರೆ ಬೇರೆಯಾಗಿಯೇ ಇವೆ. ಹಾಗಾದರೆ ಬೆಟ್ಟದ ಮೇಲಿರುವ ಭಾಗ ಯಾವುದು? ಬೆಟ್ಟದ ಮೇಲೆಯೂ ಪ್ರತಿಮೆಯ ಸೊಂಟದ ಕೆಳಗಿನ ಎಲ್ಲಾ ಭಾಗಗಳು ಇದ್ದು, ಎರಡು ಪ್ರತಿಮೆ ನಿರ್ಮಾಣ ಯಾಕಾಗಿ ಮಾಡಲಾಯಿತು ಎನ್ನುವ ಇಂದಿನ ಪ್ರಶ್ನೆಗೆ ಶಾಸಕರು ಉತ್ತರಿಸಬೇಕಾಗುತ್ತದೆ.
ಮುಖ್ಯಮಂತ್ರಿಯಿಂದ ಉದ್ಘಾಟನೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬೊಮ್ಮಯಿಯವರು ಉದ್ಘಾಟನೆ ಮಾಡುವ ದಿನಾಂಕ ನಿಗದಿಯಾಗಿದ್ದು, ಕೊನೆಯವರೆಗೂ ಕಂಚಿನ ಪ್ರತಿಮೆ ಸಿದ್ದವಾಗದೆ ಇದ್ದಾಗ ಪೈಬರ್ ಲೇಪಿತ ಇನ್ನೊಂದು ಪ್ರತಿಮೆಯನ್ನು ಮಾಡಿ ಇದೇ ಕಂಚಿನ ಪ್ರತಿಮೆ ಎಂದು ಜನರಿಗೆ ನಂಬಿಸಲಾಗಿದೆ.
ನಾನು ಲೋಹ ತಜ್ಞನಲ್ಲ ಇಷ್ಟೆಲ್ಲಾ ಮೋಸವನ್ನು ತನ್ನೊಳಗೆ ಇರಿಸಿಕೊಂಡ ಕಾರ್ಕಳದ ಶಾಸಕ ಸುನೀಲ್ ಕುಮಾರರು ನೇರ ಪ್ರಶ್ನೆಗೆ ಉತ್ತರಿಸದೇ ತಾನು ಪ್ರತಿಮೆಯ ನಿರ್ಮಾಣದ ಕೆಲಸಕ್ಕೆ ಆದೇಶಿಸಿದ್ದೇನೆ. ಆದರೆ ಅಧಿಕಾರಿಗಳು ಯಾವುದರಿಂದ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ನಾನು ಲೋಹ ತಜ್ಞನಲ್ಲ ಎನ್ನುವ ಮಾತನ್ನು ಹೇಳಿ ತನ್ನ ಮೇಲೆ ಬಂದಿರುವ ಗಂಭೀರ ಆರೋಪದಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ತನಿಖೆಯ ಮೊದಲು ಪ್ರತಿಮೆಯನ್ನು ಕಂಚಿನಿಂದಲೇ ಮಾಡಲಾಗಿದೆ ಎಂದು ಆಕಾಶ ಭೂಮಿ ಒಂದು ಮಾಡುವಂತೆ ವಾದ ಮಾಡುತ್ತಿದ್ದ ಸುನಿಲ್ ಕುಮಾರ್, ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾದ ನಂತರ ತನ್ನ ಈ ಮೊದಲಿನ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ಶಾಸಕರ ತಪ್ಪಿಗೆ ಅಧಿಕಾರಿಗಳಿಗೆ ಶಿಕ್ಷೆ
ಸುನೀಲ್ ಕುಮಾರ್ ಎಸಗಿರುವ ಈ ಕೃತ್ಯದಿಂದಾಗಿ ಈಗ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಾಬೀತಾಗಿದೆ. ಅವರು ನ್ಯಾಯಾಲಯದಿಂದ ಶಿಕ್ಷೆ ಅನುಭವಿಸುವಂತಾಗಿದೆ. ಶಾಸಕರ ರಾಜಕೀಯ ಆಟಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ.
ರಾಜೀನಾಮೆಗೆ ಆಗ್ರಹ
ದೇವರ ಹೆಸರಿನಲ್ಲಿ ನಡೆದ ಇಷ್ಟು ದೊಡ್ಡ ಧರ್ಮ ದ್ರೋಹದ ಕೆಲಸಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕ್ಷಮೆಯಾಚಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಪುರಸಭಾ ಸದಸ್ಯ ವಿವೇಕ್ ಶೆಣೈ, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಉಪಸ್ತಿತರಿದ್ದರು.

