(Koodligi) ಕೂಡ್ಲಿಗಿ : ಸಮಾಜ ಸೇವಕಿ ಹಣ್ಣಿನ ವ್ಯಾಪಾರಿ, ಗೌರಮ್ಮ ಸಿಂಧೆಯವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ
ವಿಜಯನಗರ ಜಿಲ್ಲೆ (Koodligi), ಕೂಡ್ಲಿಗಿ: ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ, ಪೊಲೀಸ್ ವಸತಿ ವಸತಿ ಸಮುಚ್ಚಯಗಳ ಹತ್ತಿರದ ಹಣ್ಣಿನ ವ್ಯಾಪಾರ ಮಾಡುವ ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆಯವರಿಗೆ, ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ಕೊಡಲ್ಪಡುವ 2024ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ಜರಗಿದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಸಮಾಜ ಸೇವಕಿ ಶ್ರೀಮತಿ ಗೌರಮ್ಮ ಸಿಂಧೆ, ಹಾಗೂ ಅವರ ಪತಿ ಮಹಂತೇಶ ಸಿಂಧೆ ದಂಪತಿಗಳಿಬ್ಬರು ತಮ್ಮ ಜೀವನ ನಿರ್ವಹಣೆಗೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿಯ ರಸ್ತೆ ಬದಿಯಲ್ಲಿ, ಗೂಡಂಗಡಿಯೊಂದರಲ್ಲಿ ವಿವಿದ ಬಗೆಯ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದಾರೆ. ಅವರು ಪ್ರತಿ ದಿನದ ತಮ್ಮ ಅಮೂಲ್ಯವಾದ ಒಂದೆರೆಡು ತಾಸುಗಳನ್ನು, ತಮ್ಮ ಪ್ರವೃತ್ತಿಯಾದ ಸಮಾಜ ಸೇವೆ ಹಾಗೂ ಕಲಾ ಕ್ಷೇತ್ರದ ಸೇವೆಗೆಂದೇ ಮುಡುಪಾಗಿಸಿಕೊಂಡಿದ್ದಾರೆ.
ಈ ದಂಪತಿಗಳಿಗೆ ಪೂರಕವಾಗಿ, ಅವರ ಮಕ್ಕಳೂ ಸಹ ಇವರೊಟ್ಟಿಗಿದ್ದು ಸಹಕರಿಸುತ್ತಿದ್ದಾರೆ. ಸಮಾಜ ಸೇವಕಿಯಾಗಿ ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆರವರು ತಮ್ಮ ಬಾಲ್ಯ ಜೀವನದಿಂದಲೂ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಮತಿ ಗೌರಮ್ಮ ಮಹಂತೇಶ ರವರು ಅಧ್ಯಕ್ಷರು ಶ್ರೀ ಮಾಯಮ್ಮದೇವಿ ತೊಗಲುಗೊಂಬೆ ಕಲಾ ಟ್ರಸ್ಟ್ ಬಡೆಲಡಕು, ಶಿಳ್ಳೆಕ್ಯಾತರ ಮಹಿಳಾ ಕ್ಷೇಮ ಭಿವೃದ್ಧಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಕೂಡ್ಲಿಗಿಯ ಬೀದಿ ಬದಿ ವ್ಯಾಪಾರಿಗಳ ಮಹಿಳಾ ಮಹಾ ಮಂಡಲದ ಸೇವೆ ಸಲ್ಲಿಸುತ್ತಿದ್ದಾರೆ.
ನಾಡಿನ ಉತ್ಸವಗಳಲ್ಲಿ, ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ತಮ್ಮ ಪೂರ್ವಜರ ಕುಲ ಕಸುಬು ಹಚ್ಚೆ ಹಾಕೋದು, ತೊಗಲು ಗೊಂಬೆಯಾಡಿಸುವುದನ್ನು ಮುಂದುವರಿಸಿದ್ದಾರೆ.
ಕೊರೋನಾ ಸಂಕಷ್ಟ, ಪ್ರಾಕೃತಿಕ ವಿಪತ್ತುಗಳ ಸಂದರ್ಭಗಳಲ್ಲಿ ನೊಂದವರಿಗೆ ಅಗತ್ಯ ನೆರವು ನೀಡುವ ಮೂಲಕ, ಸಮಾಜ ಸೇವೆ, ಕುಟುಂಬ ಕಲಹಗಳು ಗುಂಪು ಘರ್ಷಣೆಗಳ ನ್ಯಾಯ ಪಂಚಾಯ್ತಿಯಲ್ಲಿ ಭಾಗಿ, ಶೋಷಿತರ ಪರ ಹೋರಾಟ, ನೊಂದವರ ಕಣ್ಣೀರು ಒರೆಸುವಲ್ಲಿ ತೊಡಗಿಸಿಕೊಳ್ಳುವ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮುದಾಯಕ್ಕೆ, ಗ್ರಾಮಕ್ಕೆ ಸರಕಾರದಿಂದ ಮೂಲಭೂತ ಸೌಕರ್ಯ, ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಹೋರಾಟಗಳು, ನಾಡು ನುಡಿ ಉಳಿವಿಗಾಗಿ ಹೋರಾಟಗಳಲ್ಲಿ ಭಾಗಿ, ದಲಿತ ಪರ ನಿಲುವಿನೊಂದಿಗೆ ಶೋಷಣೆ ವಿರುದ್ಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶೈಕ್ಷಣಿಕ ಗ್ರಾಮೀಣಾಭಿವೃದ್ಧಿಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವುದು. ಅನಾಥ ಮಹಿಳೆಯರಿಗೆ ಆಶ್ರಯ ನೀಡುವುದು. ಮಹಿಳೆಯರಲ್ಲಿ ಸಂಘಟನೆ, ಹೋರಾಟ ಮನೋಭಾವನೆ ಜಾಗೃತಿ ಮೂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದರು.
ವಿವಿದ ಸನ್ಮಾನ ಬಿರುದಾವಳಿಗಳು ಗೌರಮ್ಮರವರ ಸೇವಾ ಮನೋಭಾವ ಪರಿಗಣಿಸಿ ಅವರ ಮುಡಿಯನ್ನು ಸೇರಿವೆ. ನಾಡ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಜಿಲ್ಲಾ ತಾಲೂಕು ಸ್ಥಳೀಯ ಸಂಘ ಸಂಸ್ಥೆಗಳು, ಗೌರಮ್ಮನವರ ಸೇವಾ ಮನೋಭಾವಕ್ಕೆ ಮನ್ನಣೆ ನೀಡಿ ಸನ್ಮಾನಿಸಿ ಗೌರವ ಸಲ್ಲಿಸಿವೆ.
ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ನವರು, 2024ರ ಕರ್ನಾಟಕ ರಾಜ್ಯೋತ್ಸವ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದು, ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆಯವರಿಗೆ ಕಿರೀಟಪ್ರಾಯವಾಗಿ ಕಂಗೊಳಿಸಲಿದೆ.

