ಕೊಪ್ಪಲಂಗಡಿಯಲ್ಲಿ ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ, ಆಸ್ಪತ್ರೆಯ ಹಾದಿಯಲ್ಲಿ ನಿಧನ
(Kaup)ಕಾಪು: ಇಲ್ಲಿಯ ಠಾಣಾ ವ್ಯಾಪ್ತಿಯ ಕೊಪ್ಪಲಂಗಡಿ ಪ್ರಶಾಂತ್ ಆಸ್ಪತ್ರೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ ವಯೋ ವೃದ್ಧರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ಘಟಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಿಯಾ ಕಾರು ಸ್ಥಳಿಯ ನಿವಾಸಿ ಪೀರ್ ಸಾಹೇಬ್(೭೦) ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಅವರನ್ನು ಎಸ್ಡಿಪಿಐ ಅಂಬುಲೆನ್ಸ್ ನಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.
ನಿನ್ನಯಷ್ಟೇ ಮೂಳೂರಿನರಾಹೆ ೬೬ರಲ್ಲಿ ಕಾರು ಅಪಘಾತದಲ್ಲಿ ಡಿಜೆ ಮರ್ವಿನ್ ಎಂಬವರು ಮೃತಪಟ್ಟಿದ್ದು, ಮರುದಿನವೇ ಅಪಘಾತದಲ್ಲಿ ಇನ್ನೊಂದು ಸಾವು ಸಂಭವಿಸಿದೆ.
ಗಾಯಾಳುವನ್ನು ಉಚ್ಚಿಲದ ಆಪತ್‌ಭಾಂಧವ ಜಲಾಲುದ್ದೀನ್ ರವರು ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಪಟ್ಟಿದ್ದಾರೆ. ದುರದೃಷ್ಠವಶಾತ್ ಗಾಯಾಳು ಮೃತಪಟ್ಟಿದ್ದಾರೆ.
ಹೆದ್ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೂ, ಹೊತ್ತು ಗೊತ್ತಿಲ್ಲದೆ ಅಪಘಾತ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನ ಪಡುವ ಜಲಾಲ್‌ರವರ ಈ ತಂಡ ಶ್ಲಾಘನೀಯ ಕೆಲಸ ಮಾಡುತ್ತಿದೆ.
ಕಾಪು ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

