ಕ್ರೇನ್ ತೊಟ್ಟಿಲಿನಿಂದ ಉರುಳಿಬಿದ್ದು ಓರ್ವ ಸಾವು, ಮಹಿಳೆ ಗಂಭೀರ
ಉಡುಪಿ,ಜೂ.14: ಕ್ರೇನ್ ಬಳಸಿಕೊಂಡು, ಅದರ ತೊಟ್ಟಿಲಿನಲ್ಲಿ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದ ಇರ್ವರು ತೊಟ್ಟಿಲು ವಾಲಿಕೊಂಡಿದರಿಂದ ಇರ್ವರು ನೆಲಕ್ಕುರುಳಿ ಬಿದ್ದ ದುರ್ಘಟನೆ ಕೋರ್ಟ್ ಹಿಂಬಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಛೇರಿ ಸನಿಹ ಶನಿವಾರ ಬೆಳಿಗ್ಗೆ ಘಟಿಸಿದೆ.
ಘಟನೆ ತಿಳಿದು ಧಾವಿಸಿ ಬಂದು ಗಂಭೀರ ಸ್ಥಿತಿಯಲ್ಲಿದ್ದ ಇರ್ವರು ಗಾಯಾಳುಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅದಾಗಲೇ ಪರೀಕ್ಷಿಸಿದ ವೈದ್ಯರು, ಗಾಯಗೊಂಡಿದ್ದ ಫ್ರಾನ್ಸಿಸ್ ಪುರ್ಟಾಡೋ (65) ಎಂಬವರನ್ನು ಮೃತ ಘೋಷಿಸಿದ್ದಾರೆ.
ಮೃತರು ಮನೆ ಮಾಲಕರ ಸಹೋದರ ಎಂದು ತಿಳಿದುಬಂದಿದೆ. ಇವರೊಂದಿಗೆ ಕ್ರೇನ್ನಲ್ಲಿ ತೆರಳಿದ್ದ ಮನೆ ಕೆಲಸದಾಕೆ ಶಾರದಾ (35) ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಮಲ್ಪೆ ಕಲ್ಮಾಡಿಯವರೆಂದು ಹೇಳಲಾಗಿದೆ.
ಎರಡು ವ್ಯಕ್ತಿಗಳು ಕೆಳಗೆ ಬಿದ್ದು ನರಳಾಡುತ್ತಿದ್ದರೂ, ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಮುಂದಾಗದೆ, ಕ್ರೇನೊಂದಿಗೆ ಸ್ಥಳದಿಂದ ಪರಾರಿಯಾಗಿರುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಉಡುಪಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

