ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯರಿಗೆ ಅನಂತಪ್ರಕಾಶ ಪುರಸ್ಕಾರ
(Kinnigoli) ಕಿನ್ನಿಗೋಳಿ: ಪತ್ರಕರ್ತರಾಗಿ, ಬರಹಗಾರರಾಗಿ, ಜಾನಪದ ಸಂಶೋಧಕರಾಗಿ, ಯಕ್ಷಗಾನ ಕಲಾವಿದರಾಗಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರೀಯಾಶೀಲರಾಗಿ, ವಿಮರ್ಶಕರಾಗಿ ಹೆಸರು ಮಾಡಿರುವ ಕೆ. ಎಲ್. ಕುಂಡಂತಾಯರವರಿಗೆ ಈ ಬಾರಿಯ ಅನಂತ ಪ್ರಕಾಶ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ಅನಂತ ಪ್ರಕಾಶ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.
ಕೆ. ಎಲ್. ಕುಂಡಂತಾಯರವರು ನಾಗಾರಾಧನೆ, ದೈವಾರಾಧನೆ, ಸಿರಿ ಆರಾಧನೆ ಅಲ್ಲದೆ ನೂರಾರು ದೇವಾಲಯಗಳ ಬಗ್ಗೆ ವಿಶೇಷ ಸಂಶೋಧನಾ ಬರಹಗಳನ್ನು ಪ್ರಕಟಿಸಿದವರು.
ವಿರಾಟ್ ದರ್ಶನ, ಶ್ರೀ ದುರ್ಗಾ ದರ್ಶನ, ಕಟೀಲು ಶ್ರೀ ದುರ್ಗಾ ದರ್ಶನ, ಅಣಿ ಅರದಲ, ಭಾರ್ಗವರಾಮ, ಮೊದಲಾದ ಕೃತಿಗಳನ್ನು ಸಂಪಾದಿಸಿದವರು.
ಯಕ್ಷಗಾನ, ಜಾನಪದ ಇವರ ಮೆಚ್ಚಿನ ಅಧ್ಯಯನ ಕ್ಷೇತ್ರ. ನಲವತ್ತಕ್ಕೂ ಹೆಚ್ಚು ಕೃತಿಗಳ ವಿರಚಿತರು. ಇವರಿಗೆ ಈ ಬಾರಿಯ ಅನಂತ ಪ್ರಕಾಶ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಪುರಸ್ಕಾರವು ಕುಂಡಂತಾಯರ ಸಾಹಿತ್ಯ ಸಾಧನೆಗಳ ಕುರಿತಾದ ಪರಿಚಯ ಕೃತಿ ಹಾಗೂ ರೂ. 10,000ವನ್ನು ಒಳಗೊಂಡಿದ್ದು, ಸಪ್ಟಂಬರ್ 1 ರ ಭಾನುವಾರ ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ಅನಂತಪ್ರಕಾಶ ಪತ್ರಿಕೆಯ ೨೯ನೇ ವರ್ಷಾಚರಣೆ ಸಂದರ್ಭದಲ್ಲಿ ನೀಡಲಾಗುವುದು ಎಂದು ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.

