ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ಆಗ್ಲೇಬೇಕು: ಜೈನ ಸಮಾಜ ಆಗ್ರಹ
ದಾವಣಗೆರೆ: ಮುನಿ ಕಾಮಕುಮಾರ ನಂದಿ ಮಹಾರಾಜ ಜೈನಮುನಿ ಕೊಲೆಗೈದ ಹಂತಕರಿಗೆ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೈನ ಸಮುದಾಯದ ಮುಖಂಡ ಗೌತಮ್ ಜೈನ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ದಿಗಂಬರ ಜೈನ ಮುನಿಗಳಾದ ಪರಮಪೂಜ್ಯ ಆಚಾರ್ಯ ಶ್ರೀ 108 ಕಾಮ
ಕುಮಾರನಂದಿ ಮಹಾರಾಜರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಹತ್ಯೆ ಮಾಡಿರುವುದು ಖಂಡನೀಯ. ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ನೋವಿನ ಸಂಗತಿ. ಈ ಕೃತ್ಯವನ್ನು ಸಕಲ ಸಮಾಜವು ಖಂಡಿಸುತ್ತದೆ ಎಂದರು.
ಘಟನೆ ಕುರಿತಂತೆ ಬೆಳಗಾವಿಯ ಉನ್ನತ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ ಹಂತಕರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಹಲವಾರು ಜಾಗರೂಕತೆಯನ್ನು ಕಾಪಾಡಿಕೊಂಡು
ತನಿಖೆಯ ಕಾರ್ಯಾಚರಣೆ ಮುಂದುವರಿಸಿಕೊಂಡು ಬಂದಿರುವುದು ಉತ್ತಮ. ಆದರೆ ಹಂತಕರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

