ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 25ನೇ ಸಂಚಿಕೆಯ ವಿವೇಕ ಸ್ಮೃತಿ ಕಾರ್ಯಕ್ರಮ
ಸಂಪನ್ಮೂಲ ವ್ಯಕ್ತಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ರಮಿತಾ ಸೂರ್ಯವಂಶಿ ಉಪಸ್ಥಿತಿ
(Putturu) ಪುತ್ತೂರು : ಭಾರತ ದೇಶ ಯಾವಾಗಲೂ ತಾರುಣ್ಯ ರಾಷ್ಟ್ರವಾಗಿರಬೇಕೆಂಬುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು. ನಾವು ಇಡುವ ಹೆಜ್ಜೆ ಹೇಗಿರಬೇಕೆಂದರೆ ಹಿಂದೆ ತಿರುಗಿ ನೋಡಿದರೂ ಕಾಣುವಂತೆ, ಮರಳುಗಾಡಿನಲ್ಲಿ ನಡೆದರೂ ಹೆಜ್ಜೆಗುರುತು ಗೋಚರಿಸುವಂತಿರಬೇಕು ಎಂದು ಕಾರ್ಕಳದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಮಿತಾ ಸೂರ್ಯವಂಶಿ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ನಡೆದ 25ನೇ ಸಂಚಿಕೆಯ ವಿವೇಕ ಸ್ಮೃತಿಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯ ಪ್ರಜೆಯೂ ವಿದ್ಯಾವಂತನಾಗಬೇಕು. ವಿವೇಕಾನಂದರ ನೈತಿಕತೆಯನ್ನು ಬೆಳೆಸಿಕೊಂಡು ಉನ್ನತ ಮಟ್ಟದ ಗುರಿಯನ್ನು ಹೊಂದಿ ದೇಶವನ್ನೇ ಬೆಳಗುವಂತಾಗಬೇಕು.
ವಿವೇಕಾನಂದರು ಬಹು ಹಸನ್ಮುಖಿ ವ್ಯಕ್ತಿ. ನಮ್ಮಿಂದ ಯಾವುದೂ ಸಾಧ್ಯವಿಲ್ಲ ಎಂದುಕೊಂಡಾಗ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ನೋಡಿ ಅವರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರೆ ನಾನು ಎಲ್ಲವನ್ನೂ ಸಾಧಿಸಬಲ್ಲೆ ಎಂಬ ಆತ್ಮಸ್ಥೈರ್ಯ ಮೂಡುತ್ತದೆ. ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಇಂದು ರಾಷ್ಟ್ರದಲ್ಲಿ ನಡೆಯುವ ಅನೇಕ ಪ್ರಗತಿಪರ ಕಾರ್ಯಗಳಿಗೆ ಸ್ವಾಮೀಜಿಯವರೇ ಸ್ಫೂರ್ತಿ ಎಂದೂ ರಮಿತಾ ಸೂರ್ಯವಂಶಿ ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ರಾಧಾಕೃಷ್ಣರೈ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾಎಸ್ ಉಪಸ್ಥಿತರಿದ್ದರು.
ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಸ್ವಾಗತಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಕವಿತಾ ಕೆ ಜಿ ವಂದಿಸಿದರು. ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿ ನವೀನ್ಕೃಷ್ಣ ನಿರೂಪಿಸಿದರು.

