ತೆಂಕ ಎರ್ಮಾಳು: ರಿಕ್ಷಾಗೆ ಟೆಂಪೋ ಡಿಕ್ಕಿ, ಇಬ್ಬರು ಮಹಿಳೆಯರಿಗೆ ಗಾಯ
(Yermal) ಎರ್ಮಾಳು : ಮೀನು ಸಾಗಾಟ ಮಾಡುತ್ತಿದ್ದ ಟೆಂಪೋವೊಂದುತೆಂಕ ಎರ್ಮಾಳುನಾರಳ್ತಾಯ ಗುಡಿ ಬಳಿ ಅಟೋ ರಿಕ್ಷಾವೊಂದಕ್ಕೆ ಹಿಂಬದಿನಿಂದ ಗುದ್ದಿದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.
ಗಾಯಗೊಂಡವರನ್ನು ತೆಂಕ ಎರ್ಮಾಳು ನಿವಾಸಿಗಳಾದ ಚಂದ್ರಾವತಿ ಹಾಗೂ ಸಾವಿತ್ರಿ ಎಂದು ಗುರುತಿಸಲಾಗಿದೆ. ಅವರು ಎರ್ಮಾಳಿನ ಮುಸ್ತಾಕ್ ಎಂವರ ಅಟೋ ರಿಕ್ಷಾದಲ್ಲಿ ಮಲ್ಪೆಗೆ ಹೋಗಿ ಮೀನು ಹೇರಿಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ಟೆಂಪೋ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಅಟೋ ರಿಕ್ಷಾ ಮರವೊಂದಕ್ಕೆ ಸವರಿಕೊಂಡು ಪೊದೆಯೊಂದರಲ್ಲಿ ಹೋಗಿ ನಿಂತಿದೆ. ಅಟೋದಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಜಮಾಡಿ ಟೋಲ್ ಸಿಬ್ಬಂದಿಗಳು ಹಾಗೂ ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಹೆದ್ದಾರಿಯಲ್ಲಿದ್ದ ವಾಹನವನ್ನು ತೆರವುಗೊಳಿಸಿ ಹೆದ್ದಾರಿ ಸಂಚಾರ ಸುಗಮಗೊಳಿಸಿದ್ದಾರೆ.

