ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ
(Mangaluru) ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಶುಕ್ರವಾರ ಬೆಳಿಗ್ಗೆ ಡಿಎಆರ್ ಪೆರೇಡ್ ಮೈದಾನ ಪಾಂಡೇಶ್ವರ, ಮಂಗಳೂರು ಇಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಅಪರಾಧ ಮತ್ತುಸಂಚಾರ ಇದರ ಪೊಲೀಸ್ ಉಪ ಆಯುಕ್ತ ಶ್ರೀ ಬಿ.ಪಿ. ದಿನೇಶ್ ಕುಮಾರ್, ನೆರವೇರಿಸಿ ಪುರುಷ ಹಾಗೂ ಮಹಿಳಾ ಗೃಹರಕ್ಷಕರ ಓಟದ ಸ್ಪರ್ಧೆಗೆ ಚಾಲನೆಗೆ ನೀಡಿದರು.
ಅವರು ಈ ಸಂದರ್ಭ ಮಾತನಾಡಿ, ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಕ್ರೀಡೆಯ ಉನ್ನತಿ ಹಾಗೂ ಜಿಲ್ಲೆಯ ಗೌರವ ಹಿರಿಮೆಯನ್ನು ಕಾಪಾಡುವುದರೊಂದಿಗೆ ಕ್ರೀಡೆಯನ್ನು ಗೆಲ್ಲಿಸಿ ಎಂಬುದಾಗಿ ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ, ಗೃಹರಕ್ಷಕ ದಳದ ಸದಸ್ಯರಿಗೆ ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಕ್ರೀಡೆ ಅವಶ್ಯಕ ಎಂದು ನುಡಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಉತ್ತಮ ಆಟ ಆಡಿ ಜಿಲ್ಲೆಯ ಘನತೆ ಹೆಚ್ಚಿಸಿ, ವಲಯ ಮಟ್ಟಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರುವಂತೆ ಕರೆ ನೀಡಿದರು.
ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ಮಟ್ಟದಲ್ಲಿ ವಿಜೇತರಾಗುವ ಗೃಹರಕ್ಷಕರಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಶ್ರೀ ಗೋಪಿನಾಥ್ ಬಿ.ಎನ್. ಕಛೇರಿ ಅಧೀಕ್ಷಕರು ಸ್ವಾಗತಿಸಿದರು.
ಮಂಗಳೂರು ಘಟಕದ ಗೃಹರಕ್ಷಕ ರಾಘವೇಂದ್ರ ಪ್ರಾರ್ಥಿಸಿದರು.
ಉತ್ತರ ಕನ್ನಡ ಜಿಲ್ಲೆಯ ಬೋಧಕರಾದ ರಘುರವರು ಗೌರವ ವಂದನೆ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಬೋಧಕರಾದ ರಾಕೇಶ್ ಬಿ. ಗೋನಾಳ್ ಇವರು ಪ್ರಮಾಣ ವಚನ ಬೋಧಿಸಿದರು.
ಮಂಗಳೂರು ಘಟಕದ ಘಟಕಾಧಿಕಾರಿ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‍ಶೇರಾ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕ ಹಾಗೂ ನಾಲ್ಕು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಗೃಹ ರಕ್ಷಕ ಗೃಹರಕ್ಷಕಿಯರು ಹಾಜರಿದ್ದರು.