ದ್ವೇಷ ಭಾಷಣ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲು
ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನಾ ಸಭೆಯಲ್ಲಿ ಶಾಸಕರಿಂದ ದ್ವೇಷ ಭಾಷಣ
(Udupi) ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ದ್ವೇಷ ಭಾಷಣ ಮಾಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾಂಗ್ರೆಸ್ ಮುಖಂಡರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಸಂಬಂಧ ಮಂಗಳವಾರ ಮಧ್ಯರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ಮುಖಂಡರು, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರುರವರು ನೀಡಿದ ದೂರಿನಂತೆ ಶಾಸಕ ಯಶ್ಪಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್. ವಕೀಲರಾದ ಹಬೀಬ್ ಅಲಿ, ಹರೀಶ್ ಪಾಂಗಳ ಮೊದಲಾದವರು ಉಪಸ್ಥಿತರಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕಾಂಗ್ರೆಸ್ ಹಾಗೂ ಸಿಜೆಪಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಪ್ರಚೋಧನಾಕಾರಿ ಹಾಗೂ ದ್ವೇಷ ಭಾಷಣ ಎ೦ದು ಪರಿಗಣಿಸಬಹುದಾದ ಹೇಳಿಕೆಗಳನ್ನು ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026 ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ *ಭಾರತೀಯ ನ್ಯಾಯ ಸಂಹಿತೆ (BNS) ಯ 57, 192, 196(2), 352, 353(2) 351(2)*0 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

