ಮಂಗಳೂರು ಮತ್ತು ಮೂಲ್ಕಿ ಯಲ್ಲಿ ಕಳ್ಳತನ: ಉಡುಪಿಗೆ ಪರಾರಿ
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಒಂದೇ ತಂಡ ದುಬಾರಿ ಬೈಕ್ ಗಳ ಸರಣಿ ಕಳ್ಳತನ ನಡೆಸಿದ್ದು ರಾ.ಹೆ 66 ರ ಮೂಲಕ ಉಡುಪಿ ಜಿಲ್ಲೆಯ ಊರುಗಳಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ದ.ಕ ಜಿಲ್ಲೆಯ ಮೂಲ್ಕಿ ಮತ್ತು ಮಂಗಳೂರಿನಿಂದ ಎರಡು ಆರ್15 ಬೈಕ್ ಕಳವು ಮಾಡಿರುವ ಒಂದೇ ತಂಡ ಉಡುಪಿ ಜಿಲ್ಲೆಯ ಕಾಪು ಮಜೂರು ಮತ್ತು ಉದ್ಯಾವರ ಕಡೆ ಸಾಗಿದ್ದು ನಿಪುಣ ಕಳ್ಳತನ ಗ್ಯಾಂಗ್ ಒಂದು ಕಾರ್ಯಾಚರಿಸುತ್ತಿರುವ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸುತ್ತಿದೆ.
ಘಟನೆಯ ವಿವರ:
ಮೂಲ್ಕಿ ಬಪ್ಪನಾಡು ಪರಿಸರದ ನಿವಾಸಿ ನಿತೀಶ್ ಭಂಡಾರಿ ಯವರು ಪ್ರತಿದಿನ ಮಂಗಳೂರಿಗೆ ಕೆಲಸಕ್ಕೆ ತೆರಳುವಾಗ ಬಪ್ಪನಾಡು ದೇವಳದ ಪಕ್ಕ ಬೈಕ್ ನಿಲ್ಲಿಸಿ ತೆರಳುತ್ತಿದ್ದರು. ಶುಕ್ರವಾರ ಸಂಜೆ ಅವರು ಕೆಲಸದಿಂದ ಹಿಂದಿರುಗುತ್ತಿದ್ದಂತೆ ಬೈಕ್ ಕಾಣೆಯಾಗಿದ್ದು, ಈ ಬಗ್ಗೆ ತಕ್ಷಣ ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ತನ್ನ ಸ್ವಂತ ಪ್ರಯತ್ನದಿಂದ ಕಳ್ಳರ ಜಾಡು ಹಿಡಿಯಲು ಮುಂದಾದ ನಿತೀಶ್ ಅಕ್ಕಪಕ್ಕದ ಊರಿನಲ್ಲಿ ವಿಚಾರಿಸುತ್ತಿದ್ದು, ಸಿಸಿಟಿವಿಗಳ ಆಧಾರಗಳನ್ನು ಅವಲಂಬಿಸುತ್ತಾ ಹುಡುಕಾಟ ಮುಂದುವರೆಸಿದ್ದಾರೆ. ಈ ಸಂದರ್ಭ ಹೆಜಮಾಡಿ ಟೋಲ್ ಗೇಟ್, ಪಡುಬಿದ್ರಿ, ಎರ್ಮಾಳು ಸಹಿತ ರಾ.ಹೆ 66 ರಲ್ಲಿ ಬೈಕ್ ಸಾಗಿರುವುದು ಕಂಡು ಬಂದಿದೆ. ಆದರೆ ಒಂದು ಬೈಕ್ ಅಲ್ಲದೆ ಎರಡು ಬೈಕ್ ಒಟ್ಟೊಟ್ಟಿಗೆ ಸಾಗುತ್ತಿರುವುದು ಕಂಡು ಬಂದಿದ್ದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಸರಣಿ ಕಳ್ಳತನದ ಗುಮಾನಿ ಹುಟ್ಟುಕೊಂಡಿದೆ.
ಮಂಗಳೂರಿನಿಂದಲೂ ಬೈಕ್ ಕಳ್ಳತನ:
ಅಸಲಿಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಫೋರಂ ಮಾಲ್ ನಿಂದ ಇದೆ ರೀತಿಯ ಮತ್ತೊಂದು ಆರ್೧೫ ಬೈಕ್ ಸಂಜೆ ಸುಮಾರು 3:45ರ ವೇಳೆಗೆ ಕಳವಾಗಿದ್ದು ಸಿಸಿಟಿವಿ ಗಳಲ್ಲಿ ಕಂಡು ಬಂದಿದ್ದು ಬೈಕ್ ಮಾಲಕ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. 4:45 ರ ವೇಳೆಗೆ ಹೆಜಮಾಡಿ ಟೋಲ್ ಗೇಟ್ ನಿಂದ ಮೂಲ್ಕಿ ಮತ್ತು ಮಂಗಳೂರಿನಿಂದ ಕಳವುಗೈದ ಎರಡೂ ಬೈಕ್ ಗಳು ಉಡುಪಿ ಕಡೆಗೆ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ಸಂದರ್ಭ ಮೂಲ್ಕಿಯಿಂದ ಕಳವಾದ ಬೈಕ್ನಲ್ಲಿ ಇಬ್ಬರು ಸವಾರರಿದ್ದು, ಮಂಗಳೂರಿನಿಂದ ಕಳವಾದ ಬೈಕ್ನಲ್ಲಿ ಒಬ್ಬನೇ ಸವಾರರಿದ್ದುದ್ದು ಕಂಡು ಬಂದಿದೆ. ಆದರೆ ಎಲ್ಲಾ ಸವಾರರು ಮಂಗಳೂರಿನ ಫೋರಂ ಮಾಲ್ ಬಳಿ ಅಲೆದಾಡುತ್ತಿರುವ ದೃಶ್ಯವೂ ಸೆರೆಯಾಗಿದೆ. ಆ ಬಳಿಕ ಮೂಲ್ಕಿಯ ನಿತೀಶ್ ಭಂಡಾರಿ ಸ್ವ ಇಚ್ಛೆಯಿಂದ ಕೈಗೊಂಡ ತನಿಖೆಯ ಪ್ರಕಾರ ಎರಡೂ ಬೈಕ್ ಗಳು ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮಾರ್ಗವಾಗಿ ಕಾಪು ತಲುಪಿದ್ದು, ಕಾಪುವಿನಲ್ಲಿ ಮಂಗಳೂರು ನಿಂದ ಕಳವಾದ ಬೈಕ್ ಧಿಕ್ಕೂ ಬದಲಿಸಿದೆ. ಮೂಲ್ಕಿಯಿಂದ ಕಳವಾದ ಬೈಕ್ ಉದ್ಯವಾರದ ವರೆಗೆ ಸಾಗಿರುವ ಬಗ್ಗೆ ಪುರಾವೆ ದೊರಕಿದೆ.
ಮರುದಿನ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಕಾಪುವಿನ ಮಜೂರು ಪ್ರದೇಶದಲ್ಲಿ ಮಂಗಳೂರಿನಿಂದ ಕಳವಾದ ಬೈಕ್ ಅನ್ನು ಕಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಆಗಂತುಕರು ಈ ಪ್ರದೇಶದಲ್ಲಿ ಅಲೆದಾಡುತ್ತಿದ್ದರು ಎಂದು ಹೇಳಲಾಗಿದೆ.
ಮೂಲ್ಕಿ ಮತ್ತು ಪಾಂಡೇಶ್ವರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

