ನೀರಿನ ಟ್ಯಾಂಕ್ ಕುಸಿದು ಬಿದ್ದು, ಬೆಳ್ಮಣ್ ಗ್ರಾಪಂ ಮಾಜಿ ಅಧ್ಯಕ್ಷೆ ನಿಧನ
(Belman) ಬೆಳ್ಮಣ್: ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲತಾ (50) ವರ್ಷ ಸಾವನ್ನಪ್ಪಿದ್ದು, ಅವರ ಮಗಳು ಪೂಜಾ (26) ಗಂಭೀರವಾಗಿ ಗಾಯಗೊಂಡ ಘಟನೆ ಘಟಿಸಿದೆ.
ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ತೆರಳಿದ್ದರು. ರಾತ್ರಿ ದೇವಸ್ಥಾನದಲ್ಲಿ ಊಟ ಮುಗಿಸಿ, ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ತೊಳೆಯಲು ಹೋದಾಗ, ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾರವರ ಮೈಮೇಲೆ ಬಿದ್ದಿದೆ.
ಘಟನೆಯಲ್ಲಿ ಶ್ರೀಲತಾ ಹಾಗೂ ಪೂಜಾ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಶೀಲತಾ ಮೃತಪಟ್ಟಿದ್ದಾರೆ.
ತೀವ್ರ ಗಾಯಗೊಂಡ ಪೂಜಾರವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

