ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಗೆ ಫಿಸಿಯೊಥೆರಪಿ ಉಪಕರಣ ಕೊಡುಗೆ
ಉಡುಪಿಯ ನೇಜಾರಿನಲ್ಲಿರುವ ನೂರುಲ್ ಫುರ್ಕಾನ್ ಟ್ರಸ್ಟ್ ನಿಂದ ಹಸ್ತಾಂತರ
(Udupi)ಉಡುಪಿ : ಉಡುಪಿಯ ನೇಜಾರು ನೂರುಲ್ ಫುರ್ಕಾನ್ ಟ್ರಸ್ಟ್ ನ ಸಹ ಸಂಸ್ಥೆಯಾದ ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಗೆ ಮಕ್ಕಳ ಶಾರೀರಿಕ ಸಾಮರ್ಥ್ಯ ವೃದ್ಧಿಗೆ ಮಹತ್ತರ ಸಹಾಯವಾಗುವ ಫಿಸಿಯೊಥೆರಪಿ ಉಪಕರಣವನ್ನು ಹಸ್ತಾಂತರ ಸಮಾರಂಭವು ಶಾಲಾ ಆವರಣದಲ್ಲಿ ನಡೆಯಿತು.
ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆಯ ವಲಯ ಮುಖ್ಯಸ್ಥರಾದ ರೋಹನ್ ಫ್ರಾಂಕೋ ವಿಶೇಷ ಅತಿಥಿಯಾಗಿ ಆಗಮಿಸಿ, ಶಾಲೆಯ ಮಕ್ಕಳ ಪುನರ್ವಸತಿ ಕಾರ್ಯಕ್ರಮಕ್ಕೆ ಬಳಸಲಾಗುವ ಅತ್ಯಾಧುನಿಕ ಫಿಸಿಯೊಥೆರಪಿ ಉಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಗುಣಮಟ್ಟದ ಪುನರ್ವಸತಿ ಹಾಗೂ ಆರೈಕೆಯ ಸೌಲಭ್ಯ ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯ ಒಂದು ಪ್ರಮುಖ ಅಂಗ. ನೂರುಲ್ ಫುರ್ಕಾನ್ ಸ್ಪೆಷಲ್ ಶಾಲೆಯ ಕೆಲಸ, ಸೇವಾಭಾವ ಹಾಗೂ ಸಮರ್ಪಣೆ ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲೆ ದಿಲ್ದಾರ್ ಫಜ್ಲುರ್ ರಹ್ಮಾನ್ ಮಾತನಾಡಿ, ವಿಶೇಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಶಾರೀರಿಕ ಪುನರ್ವಸತಿ ಸಹ ಸಮಾನವಾಗಿ ಅಗತ್ಯ. ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ನೀಡಿರುವ ಈ ಅಮೂಲ್ಯ ಬೆಂಬಲದ ಮೂಲಕ ನಮ್ಮ ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಮತ್ತಷ್ಟು ಬಲವಾಗಲಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಇಕ್ಬಾಲ್ ಮನ್ನ, ಟ್ರಸ್ಟಿ ಅಶ್ರಫ್ ಬಂಗ್ರೆ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಕೌಸರ್ ಭಾನು ಕಾರ್ಯಕ್ರಮ ನಿರೂಪಿಸಿದರು, ರೇಷ್ಮಾ ನಾಸೀರ್ ಧನ್ಯವಾದವಿತ್ತರು.

