ಪಂಚವರ್ಣದ ಕಚೇರಿಯಲ್ಲಿ ವಿನೂತನ ಪರಿಸರಸ್ನೇಹಿ ಸೀಮಂತ ಶಾಸ್ತ್ರ : ಚಿತ್ರನಟ ಎಸ್ ದೊಡ್ಡಣ ಪ್ರಶಂಸೆ
(Kota)ಕೋಟ: ಇಲ್ಲಿನ ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ತನ್ನ ವಿನೂತನ ಕಾರ್ಯಕ್ರಮಗಳಿಂದ ಮನೆ ಮಾತಾಗಿ ಬೆಳೆದು ನಿಂತಿದೆ.
ಪಂಚವರ್ಣ ಸಂಘಟನೆ ಇದೀಗ ಪಂಚವರ್ಣ ಮಹಿಳಾ ಮಂಡಲದ ಸದಸ್ಯರ ಸೀಮಂತ ಕಾರ್ಯಕ್ರಮವನ್ನು ಪರಿಸರ ಸ್ನೇಹಿ ಗಿಡ ನಡುವ ಮೂಲಕ ಅರ್ಥಪೂರ್ಣವಾಗಿಸಿಕೊಂಡಿದೆ.
ಎಂಟು ತಿಂಗಳ ತುಂಬು ಗರ್ಭಿಣಿ, ಮಹಿಳಾ ಮಂಡಲದ ಸದಸ್ಯೆ ಅಕ್ಷತಾಳಿಗೆ ಎಂಟು ವಿವಿಧ ತರಹದ ಗಿಡಗಳನ್ನು ಅವಳ ಕೈಯಲ್ಲಿ ನೆಟ್ಟು ನೀರೇರೆವ ಕಾಯಕ ನೆರವೆರಿಸಿಕೊಂಡಿತು. ಈ ಪರಿಸರಸ್ನೇಹಿ ಸೀಮಂತಕ್ಕೆ ಹಿರಿಯ ಚಿತ್ರನಟ ಎಸ್ ದೊಡ್ಡಣ್ಣ ಪ್ರಶಂಸಿ ಸಂಘಟನೆಗೆ ಕೃತಜತೆ ಸಲ್ಲಿಸಿದ್ದಾರೆ.
ಸೀಮಂತದಲ್ಲಿ ವಿಶೇಷತೆ
ಸಾಮಾನ್ಯವಾಗಿ ಮನೆಯಲ್ಲೆ ಅಥವಾ ಸಭಾಂಗಣದಲ್ಲಿ ಆಯೋಜಿಸುವ ಸೀಮಂತ ಶಾಸ್ತ್ರದಂತೆ ಪಂಚವರ್ಣ ಕಛೇರಿಯಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿ, ತಲೆಗೆ ತೆಂಗಿನ ಎಣ್ಣೆ ಸವರಿ, ತಲೆ ಬಾಚಿ, ಅರಸಿನ ಕುಂಕುಮ ಹಚ್ಚಿ, ಕೈಗೆ ಬಳೆ ತೊಡಿಸಿ, ಸೀರೆ ಉಡುಗೊರೆಯಾಗಿ ನೀಡಿ, ದೀಪ ಬೆಳಗಿಸಿ ವಿವಿಧ ಬಗೆಯ ತಿಂಡಿ ಬಡಿಸಿ, ಆರತಿ ಬೆಳಗಿ ಸೋಬಾನೆ ಹಾಡು ಹಾಡಿ ಸಂಭ್ರಮಿಸಿಕೊಂಡರು. ಅಲ್ಲದೆ
ಸೀಮಂತ ಶಾಸ್ತ್ರ ಮುಗಿದ ನಂತರ, ಸಹೋದರ ತಿಂಡಿ ಪೆಟ್ಟಿಗೆ ತಲೆಯ ಮೇಲೆ ಹೊತ್ತು ಕೊಂಡೊಯ್ಯುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸದಸ್ಯೆ ಅಕ್ಷತಾಳ ತಂದೆ ಪ್ರಭಾಕರ ಕಾಂಚನ್, ತಾಯಿ ಮುಕಾಂಬಿಕಾ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಉಪಾಧ್ಯಕ್ಷೆ ಸುಜಾತ ಕುಮಾರ್, ಪಂಚವರ್ಣದ ಕಾರ್ಯದರ್ಶಿ ನಿತೀನ್ ಕುಮಾರ್, ಪಂಚವರ್ಣದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.
ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲದ ವಿಶೇಷ
ಪ್ರತಿ ಭಾನುವಾರ ಮುಂಜಾನೆ ಸ್ವಚ್ಛತಾ ಅಭಿಯಾನ, ಗಿಡನೆಟ್ಟು ಪೋಷಿಸುವ ಯೋಜನೆಗಳ ನಿರಂತರತೆಯಿಂದ ರಾಜ್ಯ, ದೇಶದಲ್ಲಿ ಸದ್ದುಮಾಡುತ್ತಿದೆ. ಕನ್ನಡ ರಾಜ್ಯೋತ್ಸವ ಪುರಸ್ಕಾರ, ಕುಂದಗನ್ನಡದ ಭಾಷಾಭಿಮಾನದ ಆಷಾಡಿ ಒಡ್ರ್, ಅನಾರೋಗ್ಯ ಪೀಡತರಿಗೆ ನೆರವು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಶಾಲಾ ಮಟ್ಟದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ, ಮಹಿಳಾ ಮಂಡಲದ ಅರಿವು, ನೆರವು ಕಾರ್ಯಕ್ರಮ, ಆಧಾರ್ ಅಭಿಯಾನ, ರಕ್ತದಾನ, ಇ – ಶ್ರಮ್ ಮೇಳ ಸಹಿತ ಇತರ ಹತ್ತು ಹಲವು ಕಾರ್ಯಕ್ರಮಗಳಿಂದ ಜನಮನ್ನಣೆ ಗಳಿಸಿಕೊಂಡಿದೆ,
ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ೨೬೦ನೇ ಸಂಭ್ರಮದ ನಡುವೆ ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಈ ಸಂಘಟನೆ ಇದೀಗ ವಿನೂತನ ಕಾರ್ಯಕ್ರಮಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

