ಪಡುಬಿದ್ರಿ, ಜೂ. ೧೦: ವಿನಾಕಾರಣವಾಗಿ ಇನ್ನಾ ಗ್ರಾಮದ ಪರಿಶಿಷ್ಟ ಪಂಗಡ, ಕೊರಗ ಸಮುದಾಯದ ನಾಲ್ಕು ಯುವಕರ ಮೇಲೆ ಹೊರಿಸಲಾಗಿರುವ `ದರೋಡೆ’ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಇಡಿಯ ಪ್ರಕರಣದಲ್ಲಿ ಮೂಲ ತಪ್ಪಿತಸ್ಥನಾಗಿರುವ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಲಕ್ಷ್ಮೀ ನಾರಾಯಣ ವಿರುದ್ಧ ದಲಿತ ಮಹಿಳಾ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಬೇಕು.
ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಪಡುಬಿದ್ರಿಯಲ್ಲಿ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ನಡೆಸಲಾದ ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸಲಾಯಿತು.
ದ.ಕ., ಉಡುಪಿಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಕರೆ ನೀಡಿದ್ದ ಪ್ರತಿಭಟನಾ ಮೆರವಣಿಗೆ, ಸಭೆಯ ಬಳಿಕ ನೆರೆದಿದ್ದ ವಿವಿಧ ಸಂಘಟನೆಗಳ ನಾಯಕರು ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಗೆ ತೆರಳಿ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಅವರಿಗೆ ಈ ಕುರಿತಾದ ಮನವಿ ಪತ್ರವನ್ನು ಹಸ್ತಾಂತರಿಸಿದರು.
ಮೊದಲಿಗೆ ಪಡುಬಿದ್ರಿಯ ಕಾರ್ಕಳ ರಸ್ತೆಯ ರಾಧಾ ವ್ಯಾವಹಾರಿಕ ಸಂಕೀರ್ಣದಿಂದ ಡೊಳ್ಳು ಬಾರಿಸುತ್ತಾ, ಪೊಲೀಸರ, ತಪ್ಪಿತಸ್ಥನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಂದಿದ್ದ ಪ್ರತಿಭಟನಕಾರರು ಪಡುಬಿದ್ರಿಯ ಮಾರುಕಟ್ಟೆ ಪ್ರದೇಶದಲ್ಲಿ ಬಹಿರಂಗ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಸಂಘಟನೆಯ ರಾಜ್ಯ ಸಹ ಸಂಚಾಲಕ ಡಾ| ಕೃಷ್ಣಪ್ಪ ಕೊಂಚಾಡಿ, ಸುನಿಲ್‌ಕುಮಾರ್ ಬಜಾಲ್, ಡಾ| ಗುರುಶಾಂತ್, ಜಯನ್ ಮಲ್ಪೆ, ಮಾತನಾಡಿದರು.
ಈ ಸಂದರ್ಭ ವಿವಿಧ ಸಂಘಟನೆಗಳ ನಾಯಕರಾದ ಶ್ರೀಧರ್ ನಾಡಾ, ಯಾದವ ಶೆಟ್ಟಿ, ಬಿ. ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಕವಿರಾಜ್, ಮನೋಜ್ ವಾಮಂಜೂರು, ತಿಮ್ಮಯ್ಯ ಕೊಂಚಾಡಿ, ಗಣೇಶ್ ಆಳ್ವ, ಕೃಷ್ಣ ಇನ್ನ, ಶೇಖರ್, ಪ್ರಮೀಳಾ ಶಕ್ತಿನಗರ, ಜೆಸಿಂತಾ ಮತ್ತಿತರರಿದ್ದರು.

