ಕರಾವಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು ಬುಧವಾರವೂ ಪಡುಬಿದ್ರಿಯಲ್ಲಿ ಕಡಲಾರ್ಭಟವು ಮುಂದುವರೆದಿದೆ.
ಪಡುಬಿದ್ರಿ ಮುಖ್ಯ ಬೀಚ್ ಸೇರಿದಂತೆ ಕಾಡಿಪಟ್ಣ ಭಾಗದಲ್ಲಿ ಕಡಲ್ಕೊರೆತದ ಪ್ರಭಾವ ಹೆಚ್ಚಾಗಿದೆ. ಈಗಾಗಲೇ 6 ತೆಂಗಿನಮರಗಳು ಕಡಲ ಒಡಲು ಸೇರಿದೆ. ಮುಖ್ಯ ಬೀಚ್ ನ ಇಂಟರ್ಲಾಕ್, ಕೈರಂಪಣಿ ಗೋದಾಮು ಸದ್ಯದಲ್ಲಿ ಸಮುದ್ರ ಪಾಲಾಗುವ ಅಪಾಯದಲ್ಲಿದೆ.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಬ್ಲ್ಯೂ ಫ್ಲಾಗ್ ಮಾನ್ಯತೆ ದೊರಕಿದ ಬೀಚ್ ಸರ್ವನಾಶವಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸುಶೀಲಾ ಕಾಂಚನ್ ರವರಿಗೆ ಸೇರಿದ ತೆಂಗಿನಮರಗಳು ಸಮುದ್ರ ಪಾಲಾಗಿದೆ. ಕೈರಂಪಣಿ ಗೋದಾಮು, ಪ್ರವಾಸಿಗರ ಮಂಟಪ ಅಪಾಯದ ಭೀತಿಯಲ್ಲಿದೆ.
ತೌಖ್ತೆ ಚಂಡಮಾರುತದ ಸಮಯದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೊಕ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಶಾಸಕರಿಗೂ ಮನವಿ ಮಾಡಿದ್ದರೂ ಸ್ಪಂದನೆ ದೊರಕಿಲ್ಲ.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
