ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಅದಮಾರು ಉಭಯ ಶ್ರೀಗಳಿಂದ ಸಂಸ್ಥಾನ ಪೂಜೆ, ಆಶೀರ್ವಚನ
ಪಡುಬಿದ್ರಿ, ಮೇ 13: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಪ್ರಾಯಃಶ್ಚಿತ್ತ ಕಾರ್ಯಕ್ರಮದ ಅಂಗವಾಗಿ ರವಿವಾರದಂದು ಶ್ರೀ ದೇಗುಲಕ್ಕೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಗಮಿಸಿ ಪಟ್ಟದ ದೇವರಾದ ಶ್ರೀ ಕಾಳೀಯಮರ್ದನ ಶ್ರೀ ಕೃಷ್ಣ ಹಾಗೂ ಶ್ರೀ ವೇಣುಗೋಪಾಲ ಕೃಷ್ಣ ದೇವರ ಸಂಸ್ಥಾನ ಪೂಜೆ, ಕೀರ್ತಿಶೇಷ ಶ್ರೀ ವಿಬುಧೇಶ ತೀರ್ಥರ ವೃಂದಾವನ ಪೂಜೆಗಳು ಸಂಪನ್ನಗೊಂಡವು.
ಆ ಬಳಿಕ ಶ್ರೀ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಜೀರ್ಣೋದ್ಧಾರದ ಪರ್ಯಂತ ವಿವಿಧ ಭಜನಾ ಮಂಡಳಿಯವರಿಂದ ನಡೆಸಲಾಗುವ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ದೇವರು ಭಕ್ತರೆಂಬ ಮಕ್ಕಳನ್ನು ಆಗಾಗ್ಗೆ ಕಾಣಲೋಸುಗ ಋಷಿ, ಮುನಿಗಳಿಂದ ಅನೇಕ ದೇವಸ್ಥಾನಗಳು ಪ್ರತಿಷ್ಠಾಪಿತವಾದವು. ಅಂತಹಾ ರುದ್ರದೇವರ ಆರಾಧನೆ ನಮ್ಮನ್ನು ಕಾಪಿಡುತ್ತದೆ. ಭಗವಂತನನ್ನು ಪ್ರೀತಿಸುವವನನ್ನು ದೇವರೂ ಪ್ರೀತಿಸುತ್ತಾರೆ.
ಮುಂದಕ್ಕೆ ದೇವಸ್ಥಾನದ ಜೀರ್ಣೋದ್ಧಾರವಾಗಲಿ. ಇಲ್ಲಿನ ರುದ್ರ ಸನ್ನಿಧಾನವು ಇನ್ನಷ್ಟು ಬೆಳಗಲಿ. ಎಲ್ಲರ ಐಕ್ಯಮತ್ಯದಿಂದ ಕಾರ್ಯಗಳೆಲ್ಲವೂ ನಡೆಯಲಿ ಎಂದರು.
ಕಿರಿಯ ಪಟ್ಟದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಗಣಪತಿ, ರುದ್ರದೇವರ ಸನ್ನಿಧಾನದಲ್ಲಿ ಏಕ ಮನಸ್ಸಿನ ಚಿಂತನೆಯೊಂದಿಗೆ ಜೀರ್ಣೋದ್ಧಾರಾದಿ ಎಲ್ಲಾ ಕಾರ್ಯವೂ ಸಾಂಗವಾಗಿ ನೆರವೇರಲಿ ಎಂದರು.
ಶ್ರೀ ಪಾದದ್ವಯರನ್ನು ಮಾಲಿಕೆ ಮಂಗಳಾರತಿ, ಫಲಕಾಣಿಕೆಗಳೊಂದಿಗೆ ಸ್ವಾಗತಿಸಲಾಯಿತು.
ಶ್ರೀಪಾದರು ವಿವಿಧ ಭಜನಾ ಮಂಡಳಿಗಳ ಪ್ರಮುಖರಿಗೆ ತಾಳಗಳನ್ನಿತ್ತು ಭಜನಾ ಕಾರ್ಯಕ್ರಮಗಳಿಗೆ ಚಾಲನೆಯಿತ್ತರು.
ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಸಹಿತ ನೆರೆದವರಿಗೆ ಎಲ್ಲರಿಗೂ ಮಂತ್ರಾಕ್ಷತೆಯನ್ನಿತ್ತು ಹರಸಿದರು.
ಶ್ರೀಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

