ಪಣಿಯೂರು ಸಹಕಾರಿ ಸಂಘದ ಸಭಾಂಗಣದಲ್ಲಿ ಉಚ್ಚಿಲದ ನೂತನ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಪಣಿಯೂರು: ಸೆಪ್ಟೆಂಬರ್ 2ರಂದು ಉಚ್ಚಿಲ ಬಡಾ ಗ್ರಾಮದ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ವಜ್ರ ಮಹೋತ್ಸವ ಸಂಭ್ರಮಾಚರಣೆಯ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಪಣಿಯೂರು ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬಿಡುಗಡೆಗೊಳಿಸಿದರು.
ಅವರು ಈ ಸಂದರ್ಭ ಮಾತನಾಡಿ, ಬೆಳಪು ಸಹಕಾರಿ ಸಂಘವು ಸ್ವತಂತ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘವಾಗಿದೆ.
ಉಚ್ಚಿಲ ಬಡಾ, ಎಲ್ಲೂರು, ಮೂಳೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ಧೇಶ ಹೊಂದಿ ಸ್ಥಾಪಿತವಾದ ಸಂಸ್ಥೆ ಇದಾಗಿದೆ.
ಸಹಕಾರಿ ಸಂಘವು 4,350 ಸದಸ್ಯರನ್ನು ಹೊಂದಿದ್ದು, 50 ಕೋಟಿ ಠೇವಣಾತಿ ಹೊಂದಿ, 48 ಕೋಟಿ ರೂಪಾಯಿ ಸಾಲವನ್ನು ನೀಡಿದೆ. ಎ ಶ್ರೇಣಿಯ ಬ್ಯಾಂಕಿಂಗ್ ಮಾನ್ಯತೆ ಹೊಂದಿದ ಸಹಕಾರಿ ಸಂಘವಾಗಿದೆ ಎಂದು ಮಾಹಿತಿ ನೀಡಿದರು.
ವಜ್ರ ಮಹೋತ್ಸವದ ಸವಿ ನೆನಪಿನ ಕಟ್ಟಡ ಸಹಕಾರಿ ಮಹಲ್ ನಲ್ಲಿ ಡಾ| ಎಂ ಎನ್ ರಾಜೇಂದ್ರ ಕುಮಾರ್ ಕಾನ್ಪರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ – ಭದ್ರತಾ ಕೊಠಡಿ ಉದ್ಘಾಟನೆ, ಸಂಸ್ಥೆಯ ಆರಂಭದಿಂದ ಇಂದಿನವರೆಗಿನ ಮಾಹಿತಿಯನ್ನೊಳಗೊಂಡ ವಜ್ರದರ್ಪಣ ಸ್ಮರಣ ಸಂಚಿಕೆ ಬಿಡುಗಡೆಯೂ ನಡೆಯಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಈ ಸಂದರ್ಭ ನಿರ್ದೇಶಕರುಗಳಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್ ಭಟ್, ಬಾಲಕೃಷ್ಣ ಎಸ್ ಆಚಾರ್ಯ, ಶೋಭಾ ಬಿ ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಉಚ್ಚಿಲ ಶಾಖಾ ಪ್ರಬಂಧಕ ನವೀನ್ ಕುಮಾರ್, ಬಾಲಕೃಷ್ಣ ಭಟ್, ಸತೀಶ್ ಗುಡ್ಡೆಚ್ಚಿ ಉಪಸ್ಥಿತರಿದ್ದರು.
