• Home  
  • ಪರಶುರಾಮ ಥೀಮ್ ಪಾರ್ಕ್ ನ ಮೂರ್ತಿಯೇ ನಕಲಿ:   ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ
- ಅಪರಾಧ - ವಿಡಿಯೋ

ಪರಶುರಾಮ ಥೀಮ್ ಪಾರ್ಕ್ ನ ಮೂರ್ತಿಯೇ ನಕಲಿ:   ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ

Share: ಪರಶುರಾಮ ಥೀಮ್ ಪಾರ್ಕ್ ನ ಮೂರ್ತಿಯೇ ನಕಲಿ:   ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ  ಉಡುಪಿ: ಬೈಲೂರಿನ ಉಮಿಕ್ಕಳ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಕುರಿತಂತೆ ಹತ್ತಾರು ಅನುಮಾನಗಳು ಎದ್ದಿವೆ. ಅಲ್ಲಿ ಪ್ರತಿಷ್ಟಾಪನೆಗೊಂಡಿರುವ ಮೂರ್ತಿ ಕಂಚಿನದ್ದೇ? ಎನ್ನುವ ಪ್ರಶ್ನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಯಾವುದೇ ಸಮರ್ಪಕ ಉತ್ತರಗಳು ಲಭಿಸದ ಕಾರಣ ಜನರ ಅನುಮಾನ ಮತ್ತಷ್ಟು ಬಲಗೊಂಡಿವೆ. ಒಟ್ಟು 14.42 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈಗಾಗಲೇ 6.72 ಕೋಟಿ ರೂ. ಪಾವತಿಯಾಗಿದೆ. ಅವುಗಳ ಪೈಕಿ 2 […]

ಪರಶುರಾಮ ಥೀಮ್ ಪಾರ್ಕ್ ನ ಮೂರ್ತಿಯೇ ನಕಲಿ:   ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ

 ಉಡುಪಿ: ಬೈಲೂರಿನ ಉಮಿಕ್ಕಳ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಕುರಿತಂತೆ ಹತ್ತಾರು ಅನುಮಾನಗಳು ಎದ್ದಿವೆ. ಅಲ್ಲಿ ಪ್ರತಿಷ್ಟಾಪನೆಗೊಂಡಿರುವ ಮೂರ್ತಿ ಕಂಚಿನದ್ದೇ? ಎನ್ನುವ ಪ್ರಶ್ನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಯಾವುದೇ ಸಮರ್ಪಕ ಉತ್ತರಗಳು ಲಭಿಸದ ಕಾರಣ ಜನರ ಅನುಮಾನ ಮತ್ತಷ್ಟು ಬಲಗೊಂಡಿವೆ.

ಒಟ್ಟು 14.42 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈಗಾಗಲೇ 6.72 ಕೋಟಿ ರೂ. ಪಾವತಿಯಾಗಿದೆ. ಅವುಗಳ ಪೈಕಿ 2 ಕೋಟಿ ರೂ. ಪಾವತಿಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇಲ್ಲ. 2 ಕೋಟಿ ಯಾವುದಕ್ಕೆ ಪಾವತಿಸಲಾಗಿದೆ ಎಂಬ ಮಾಹಿತಿ ಇಲ್ಲ. ಇನ್ನು 33 ಅಡಿ ಎತ್ತರದ 15 ಟನ್ ಭಾರದ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ಕ್ರಿಸ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆ ಮೂರ್ತಿ ರಚನೆಯ ಕಾರ್ಯವನ್ನು ವಹಿಸಿಕೊಂಡಿದೆ. 2.4 ಕೋಟಿ ರೂ. ವೆಚ್ಚ ಈ ಮೂರ್ತಿಗೆ ತಗಲಿದೆ. ಮೂರ್ತಿ ರಚನೆಗೆ ಸಂಬಂಧಿಸಿದಂತೆ 6-12-2022ರಂದು ಕೊಟೇಷನ್ ಆಹ್ವಾನಿಸಲಾಗಿದೆ. 15-12-2022ರಂದು ಕಾರ್ಯಾದೇಶ ನೀಡಲಾಗಿದೆ. ಆದರೆ 25-11-2022 ರಂದು ತಲಾ 50 ಲಕ್ಷದಂತೆ 2 ಟ್ಯಾಕ್ಸ್ ಇನ್ವಾಯ್ಸ್ ಮಾಡಲಾಗಿದೆ. ಆಶ್ಚರ್ಯ ಎಂದರೆ ಕಾರ್ಯಾದೇಶದ ಮೊದಲೇ ಮೂರ್ತಿ ರಚನೆಗೆ 1 ಕೋಟಿ ಪಾವತಿಸಲಾಗಿದೆ.

 ಅಸಲಿಗೆ ಈ ಮೂರ್ತಿಯೇ ನಕಲಿಯಾಗಿದ್ದು, ಈ ಬಗ್ಗೆ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇದರ ಉದ್ಘಾಟನೆಯನ್ನು ಜನವರಿ 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೆರವೇರಿಸಿದ್ದಾರೆ. ಉದ್ಘಾಟನೆಗೆ 2.18 ಕೋಟಿ ರೂ. ಖರ್ಚು ಮಾಡಲಾಗಿದೆ. ಅದರಲ್ಲೂ 60 ಲಕ್ಷ ರೂ.ಗೆ ಪಾವತಿಯಾದ ಬಿಲ್ಲುಗಳು ಲಭ್ಯವಾಗುತ್ತಿಲ್ಲ.

ಇನ್ನುಪರಶುರಾಮ ಥೀಂ ಪಾರ್ಕ್‌ಗೆ ಜಾಗವೇ ಮಂಜೂರಾಗಿಲ್ಲ. 2019ರ ನ.8ರಂದು ಎರ್ಲಪಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಈ ಜಮೀನನ್ನು ಪರಶುರಾಮ ಥೀಂ ಪಾರ್ಕ್ ನಿರ್ಮಿಸುವ ಉದ್ದೇಶಕ್ಕೆ ಕಾಯ್ದಿರಿಸುವ ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ಕಾರ್ಕಳ ತಹಸೀಲ್ದಾರ್‌ಗೆ ಸಲ್ಲಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಡೀಮ್ಡ್ ಫಾರೆಸ್ಟ್, ಗೋಮಾಳ ಎನ್ನುವ ನಾನಾ ಕಾರಣಗಳಿಂದ ಗ್ರಾ.ಪಂ. ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಸರಕಾರದ ಕಂದಾಯ ಅಧೀನ ಕಾರ್ಯದರ್ಶಿವರೆಗೆ ಪತ್ರ ವ್ಯವಹಾರ ನಡೆಯುತ್ತಲೇ ಸಾಗಿತ್ತು. ಆದರೆ ಇನ್ನೊಂದೆಡೆ ಯಾವುದೇ ಅನುಮೋದನೆ ಪಡೆಯದೆ ಸರಕಾರದ ಗರಿಷ್ಟ ಪ್ರಮಾಣದ ಅನುದಾನ ಅನಧೀಕೃತವಾಗಿ ಥೀಂ ಪಾರ್ಕ್ ಅಭಿವೃದ್ಧಿಗೆ ವಿನಿಯೋಗಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದರು.

 ಕಾರ್ಕಳ ಕಾಂಗ್ರೆಸ್ ಮುಖಂಡ ಶುಭದರಾವ್ ಮಾತನಾಡಿ, ಅಂದಿನ ಕಾರ್ಕಳದ ಸಚಿವರು ಈವರೆಗೆ ಈ ಬಗ್ಗೆ ಮಾತನಾಡಿಲ್ಲ. ಅವರ ಮೌನ ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿದೆ. ಈ ಬಗ್ಗೆ ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಉಸ್ತುವಾರಿ ಸಚಿವರು‌ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ಇದನ್ನು ತಂದಿದ್ದೇವೆ ಎಂದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.